ಶ್ರೀನಗರ ಜ.13 : ಜಮ್ಮು ಕಾಶ್ಮೀರದಲ್ಲಿ ಹೊಸ ಸರ್ಕಾರ ರಚನೆ ವಿಷಯದಲ್ಲಿ ಕೆಲ ದಿನಗಳಿಂದ ಮುಂದುವರೆದಿದ್ದ ಗೊಂದಲಕ್ಕೆ, ಊಹಾಪೋಹಗಳಿಗೆ ತೆರೆ ಬಿದ್ದಿದೆ. ಪಿಡಿಪಿ, ಬಿಜೆಪಿ ಮೈತ್ರಿ ಮುಂದುವರೆಯುತ್ತದೆ, ಹಿಂದಿನ ವರ್ಷದ ಮೈತ್ರಿ ಸರ್ಕಾರದ ಕಾರ್ಯಸೂಚಿಯೇ ಮುಂದುವರೆಯುತ್ತದೆ ಎಂದು ಮಂಗಳವಾರ ಆ ಎರಡೂ ಪಕ್ಷಗಳು ಸ್ಪಷ್ಟಪಡಿಸಿವೆ.
ಇತ್ತೀಚೆಗೆ ನಿಧನರಾದ ಮುಖ್ಯಮಂತ್ರಿ ಮುಫ್ತೀ ಮೊಹ್ಮದ್ ಸಯೀದ್ ಪುತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಂದಿನ ಮುಖ್ಯಮಂತ್ರಿಯಾಗಲಿದ್ದು, ಸರ್ಕಾರ ರಚನೆ ವಿಷಯದಲ್ಲಿ ಎರಡು ಪಕ್ಷಗಳು ಹೊಸದಾಗಿ ಯಾವುದೇ ಷರತ್ತುಗಳು ವಿಧಿಸಿಲ್ಲವೆಂದು ವಿವರಿಸಿದರು. ಹೊಸ ಸರ್ಕಾರ ರಚನೆ ಯಾವಾಗ ಎಂಬ ವಿಷಯದಲ್ಲಿನ ಸಸ್ಪೆನ್ಸ್ ಮುಂದುವರೆದಿದೆ.
ಪಿಡಿಪಿ ಮೈತ್ರಿಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಮಂಗಳವಾರ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದರು.