ಹೈದರಾಬಾದ್, ಜ.18- ನಿವೃತ್ತ ನ್ಯಾಯಾಧೀಶ ಪ್ರಭಾಕರ ರಾವ್ ಅವರು ತಮ್ಮ ಈಸ್ಟ್ ಮಾರೆಡ್‌ಪಲ್ಲಿ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿದೆ.
ಬಳ್ಳಾರಿಯ ಗಣಿಧಣಿ, ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಜಾಮೀನು ಪ್ರಕರಣದಲ್ಲಿ 100 ಕೋಟಿ ಲಂಚ ಪಡೆದಿದ್ದ ಆರೋಪದಲ್ಲಿ ಬಂಧಿತರಾಗಿದ್ದ ನ್ಯಾಯಮೂರ್ತಿ ಪ್ರಭಾಕರರಾವ್ ಜಾಮೀನಿನ ಮೇಲೆ ಹೊರ ಬಂದಿದ್ದರು. ಅಕ್ರಮ ಗಣಿಗಾರಿಕೆ, ಅದಿರು ಕಳ್ಳಸಾಗಣೆ ಆರೋಪದಲ್ಲಿ ಜೈಲು ಪಾಲಾಗಿದ್ದ ಜನಾರ್ದನರೆಡ್ಡಿ ಬಿಡುಗಡೆಗೆ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದ ಅವರ ಸಹೋದರ ಜಿ.ಸೋಮಶೇಖರರೆಡ್ಡಿ, ಶಾಸಕ ಟಿ.ಎಚ್.ಸುರೇಶ್‌ಬಾಬು ಅವರು ಕೊನೆಗೆ ನ್ಯಾಯಾಧೀಶರಿಗೇ ಲಂಚ ನೀಡುವ ದುಸ್ಸಾಹಸ ನಡೆಸಿದ್ದರು.
ಈ ಪ್ರಕರಣದಲ್ಲಿ ನ್ಯಾ.ಪ್ರಭಾಕರರಾವ್ ಅವರು ಸಿಕ್ಕಿಹಾಕಿಕೊಂಡಿದ್ದರು. ಜಾಮೀನುಗಾಗಿ 100 ಕೋಟಿ ರೂ.ಗಳ ಭಾರೀ ಮೊತ್ತದ ಲಂಚ ಪಡೆದಿದ್ದು ಸಾಬೀತಾದಾಗ ನ್ಯಾಯಾಧೀಶ ಪ್ರಭಾಕರರಾವ್ ಹಾಗೂ ಇತರರು ಕಾರಾಗೃಹದ ಪಾಲಾಗಬೇಕಾಯಿತು. ನಂತರದ ಬೆಳವಣಿಗೆಗಳಲ್ಲಿ ಪ್ರಭಾಕರರಾವ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಹಾಗಾಗಿ ನ್ಯಾಯಮೂರ್ತಿ ಜೈಲಿನಿಂದ ಹೊರಬಂದಿದ್ದರು. ನ್ಯಾಯಮೂರ್ತಿ ಪ್ರಭಾಕರರಾವ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.
ಜನಾರ್ದನರೆಡ್ಡಿ ಅವರ ಸಂಬಂಧಿ ಶ್ರೀನಿವಾಸರೆಡ್ಡಿ ಸುಮಾರು ಮೂರು ವರ್ಷಗಳ ಕಾಲ ಜೈಲುವಾಸ ಅನುಭವಿಸುವುದನ್ನು ತಪ್ಪಿಸಲು ಕೊನೆಗೂ ಅವರ ಬೆಂಬಲಿಗರಿಗೆ ಸಾಧ್ಯವಾಗಲಿಲ್ಲ. ಮೂರು ವರ್ಷಗಳ ಬಳಿಕ ಅವರಿಗೆ ಜಾಮೀನು ದೊರೆಯಿತು. ಆದರೆ ಜನಾರ್ದನರೆಡ್ಡಿ ಅವರು ಬಳ್ಳಾರಿಗೆ ಪ್ರವೇಶ ಮಾಡುವಂತಿಲ್ಲ. ದೇಶ ಬಿಟ್ಟು ಹೋಗುವಂತಿಲ್ಲ ಎಂಬುದೂ ಸೇರಿದಂತೆ ವಿವಿಧ ಷರತ್ತುಗಳ ಮೇಲೆ ಜಾಮೀನು ನೀಡಲಾಗಿದೆ. ಈಗ ಇದೇ ನ್ಯಾಯಮೂರ್ತಿ ಪ್ರಭಾಕರರಾವ್ ನಿಗೂಢವಾಗಿ ಸಾವನ್ನಪ್ಪಿರುವುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.