ಹೈದರಾಬಾದ್: ಭಾನುವಾರ ಆತ್ಮಹತ್ಯೆಗೆ ಶರಣಾದ ಹೈದ್ರಾಬಾದ್ ವಿವಿಯ ರೋಹಿತ್ ವೇಮುಲಾ ಎಂಬ ಸಂಶೋಧನಾ ವಿದ್ಯಾರ್ಥಿಯ ಅಂತ್ಯಕ್ರಿಯೆಯನ್ನು ಪೊಲೀಸರು ತರಾತುರಿಯಲ್ಲಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಅಂಬರ್‌ಪೇಟ್ ಎಂಬಲ್ಲಿ ರೋಹಿತ್ ಅಂತ್ಯಕ್ರಿಯೆ ನಡೆದಿದೆ. ಹೈದ್ರಬಾದ್‌ನಲ್ಲಿ ರೋಹಿತ್ ಕುಟುಂಬವಿದ್ದು, ಅಲ್ಲೇ ಅಂತ್ಯ ಸಂಸ್ಕಾರ ಮಾಡಬೇಕೆಂದು ಕುಟುಂಬದವರು ಬಯಸಿದ್ದರು. ಆದರೆ ಪೊಲೀಸರ ಒತ್ತಾಯಕ್ಕೆ ಮಣಿದು ಅಂಬರ್‌ಪೇಟ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಎಂದು ರೋಹಿತ್ ಅಮ್ಮ ರಾಧಿಕಾ ಹೇಳಿದ್ದಾರೆ.
ರೋಹಿತ್‌ನ ಸಾವಿಗೆ ನ್ಯಾಯ ಒದಗಿಸಬೇಕು. ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಮೃತದೇಹವನ್ನು ಬಿಟ್ಟುಕೊಡುವುದಿಲ್ಲ ಎಂದು ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು. ಆದರೆ ಮಂಗಳವಾರ ಬೆಳಗ್ಗೆ ಪೊಲೀಸರು ಬಲ ಪ್ರಯೋಗ ಮಾಡಿ ಮೃತದೇಹವನ್ನು ತೆಗೆದು ಕೊಂಡು ಹೋಗಿದ್ದಾರೆ.
ಅನಂತರ ರಹಸ್ಯವಾಗಿ ಅಂತ್ಯ ಸಂಸ್ಕಾರ ಮಾಡುವಂತೆ ಕುಟುಂಬದವರಿಗೆ ಹೇಳಲಾಗಿದೆ. ಪೊಲೀಸ್ ಒತ್ತಾಯಪೂರ್ವಕ ಅಲ್ಲಿ ಅಂತ್ಯ ಸಂಸ್ಕಾರ ಮಾಡುವಂತೆ ನಮ್ಮಲ್ಲಿ ಹೇಳಿದ ಕಾರಣ, ಹೆಚ್ಚಿನ ಬಂಧುಗಳಿಗೆ ಅಲ್ಲಿ ಬರಲು ಸಾಧ್ಯವಾಗಿಲ್ಲ ಎಂದು ರಾಧಿಕಾ ಹೇಳಿದ್ದಾರೆ.