ನವದೆಹಲಿ: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ದಲಿತ ಹಾಗೂ ದಲಿತೇರರ ವಿಚಾರ ಅಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಬುಧವಾರ ಹೇಳಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ರೋಹಿತ್ ಆತ್ಮಹತ್ಯೆ ಪ್ರಕರಣದಲ್ಲಿ ಸ್ಮೃತಿ ಇರಾನಿ ಹಾಗೂ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರ ಪಾತ್ರ ಇದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವೆ, ರೋಹಿತ್ ಪ್ರಕರಣದಲ್ಲಿ ಸತ್ಯವನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲೆದೆ ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದರು.
ರೋಹಿತ್ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಲಾಗುತ್ತಿದೆ. ರೋಹಿತ್ ಡೆತ್ ನೋಟ್ ನಲ್ಲಿ ಯಾರ ಹೆಸರೂ ಇಲ್ಲ. ಡೆತ್ ನೋಟ್ ನಲ್ಲಿ ಅಧಿಕಾರಿ, ಸಂಸ್ಥೆ ಹೆಸರು ಇಲ್ಲ. ಒಬ್ಬ ತಾಯಿ, ಸಚಿವೆಯಾಗಿ ರೋಹಿತ್ ಆತ್ಮಹತ್ಯೆ ಬಗ್ಗೆ ಸಂತಾಪ ಸೂಚಿಸುತ್ತಿದ್ದೇನೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ ಎಂದು ಸ್ಮೃತಿ ಇರಾನಿ ಹೇಳಿದರು.