ರಾಷ್ಟ್ರೀಯ

ಪಾಕಿಸ್ತಾನದ ಎದುರು ಭಾರತ ರಾಷ್ಟ್ರಗೀತೆ ಹಾಡುವುದು ರೋಮಾಂಚಕಾರಿ ಅನುಭವ: ಸಚಿನ್ ತೆಂಡೂಲ್ಕರ್

Pinterest LinkedIn Tumblr

IndiaTva98e44_sachin-T

ಮುಂಬೈ: ಪಾಕಿಸ್ತಾನ ತಂಡದ ಎದುರು ಪಂದ್ಯವನ್ನಾಡುವ ಮುನ್ನ ಅವರ ಎದುರೇ ಭಾರತ ರಾಷ್ಟ್ರಗೀತೆ ಹಾಡುವುದು ರೋಮಾಂಚಕಕಾರಿ ಅನುಭವ ನೀಡುತ್ತದೆ ಎಂದು ಕ್ರಿಕೆಟ್ ದಂತಕತೆ ಮಾಸ್ಟರ್ ಬ್ಲಾಸ್ಟರ್  ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಗಣರಾಜ್ಯೋತ್ಸವ ನಿಮಿತ್ತ ಖ್ಯಾತ ಕ್ರೀಡಾ ಪಟುಗಳು ಸೇರಿ ತಯಾರಿಸಿರುವ ಸ್ಪೋರ್ಟ್ಸ್ ಹೀರೋಸ್ ಎಂಬ ಸಂಗೀತ ಆಲ್ಬಮ್ ಅನ್ನು ಅನಾವರಣಗೊಳಿಸಿ ಮುಂಬೈನಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್,  ವಿಶ್ವಕಪ್ ಪಂದ್ಯಾವಳಿಯಲ್ಲಿ ಅದರಲ್ಲಿಯೂ ಪ್ರಮುಖವಾಗಿ ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯದ ವೇಳೆ ರಾಷ್ಟ್ರಗೀತೆಯನ್ನು ಹಾಡುವುದು ರೋಮಾಂಚಕ ಅನುಭವ ನೀಡುತ್ತದೆ ಎಂದು ಹೇಳಿದ್ದಾರೆ.
2011ರ  ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದ ವೇಳೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಹಾಡಿದ್ದು ನನ್ನ ಜೀವನದ ಅತ್ಯದ್ಬುತ ಕ್ಷಣ ಎಂದು ಸಚಿನ್ ಆ ಮಧುರವಾದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.  ಅಂತೆಯೇ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಸ್ಮರಿಸಿಕೊಂಡ ಸಚಿನ್, 2003ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡದ ಎದುರು ಆಡುವಾಗ ರಾಷ್ಟ್ರಗೀತೆ ಹಾಡಿದ್ದೂ ಕೂಡ ಅವಿಸ್ಮರಣೀಯ ಕ್ಷಣ ಎಂದು  ಸಚಿನ್ ಹೇಳಿದ್ದಾರೆ.
“ರಾಷ್ಟ್ರಗೀತೆಯನ್ನು ಹಾಡುವುದೇ ಹೆಮ್ಮೆಯ ಸಂಗತಿ. ಅದರಲ್ಲಿಯೂ 2003ರ ವಿಶ್ವಕಪ್ ಪಂದ್ಯಾವಳಿ ವೇಳೆ ಪಾಕಿಸ್ತಾನದಂತಹ ತಂಡದ ವಿರುದ್ಧ ಆಡುವಾಗ ಸೆಂಚ್ಯೂರಿಯನ್ ಕ್ರೀಡಾಂಗಣ ಮಧ್ಯದಲ್ಲಿ ನಿಂತು  ರಾಷ್ಟ್ರಗೀತೆ ಹಾಡುವುದು ಮತ್ತು ನಮ್ಮೊಂದಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಸುಮಾರು 60 ಸಾವಿರ ಮಂದಿ ಧ್ವನಿಗೂಡಿಸಿದ್ದು ನಿಜಕ್ಕೂ ಹೆಮ್ಮೆಯ ಕ್ಷಣವಾಗಿದೆ ಎಂದು ಸಚಿನ್ ಹೇಳಿದರು.
ದಿ ಸ್ಪೋರ್ಟ್ ಹೀರೋಸ್ ಎಂಬ ಸಂಗೀತ್ ಆಲ್ಬಮ್ ನಲ್ಲಿ ಸಚಿನ್ ರಾಷ್ಟ್ರಗೀತೆ ಹಾಡಿದ್ದು, ಅವರೊಂದಿಗೆ ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್, ಟೆನ್ನಿಸ್ ಆಟಗಾರರಾದ ಮಹೇಶ್ ಭೂಪತಿ, ಸಾನಿಯಾ ಮಿರ್ಜಾ, ಮಾಜಿ  ಹಾಕಿ ಆಟಗಾರ ಧನರಾಜ್ ಪಿಳ್ಳೈ, ಫುಟ್ ಬಾಲ್ ಆಟಗಾರ ಬೈಚುಂಗ್ ಭುಟಿಯಾ, ಕುಸ್ತಿ ಪಟು ಸುಶೀಲ್ ಕುಮಾರ್ ಮತ್ತು ಶೂಟರ್ ಗಗನ್ ನಾರಂಗ್ ಅವರು ಸಾಥ್ ನೀಡಿದ್ದಾರೆ. ಆಲ್ಬಮ್ ಅನ್ನು ಅಭಿಜಿತ್ ಪನ್ಸೆ  ಅವರು ನಿರ್ದೇಶಿಸಿದ್ದಾರೆ.

Write A Comment