ರಾಷ್ಟ್ರೀಯ

ಗಣರಾಜ್ಯೋತ್ಸವ ಪರೇಡ್ ನಲ್ಲಿ ದೇಶದ ಸೇನಾಬಲ, ಸಾಂಸ್ಕೃತಿಕ ವೈಭವ ಅನಾವರಣ

Pinterest LinkedIn Tumblr

karnataka2ನವದೆಹಲಿ: ದೆಹಲಿಯ ರಾಜ್ ಪಥ್ ನಲ್ಲಿ ಮಂಗಳವಾರ ನಡೆದ 67ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾರತದ ನೌಕಾಪಡೆ, ವಾಯುಪಡೆ ಹಾಗೂ ಭೂಸೇನಾ ಪಡೆಗಳ ಆಕರ್ಷಕ ಪರೇಡ್ ನೊಂದಿಗೆ ದೇಶದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆದವು.

ಗಣರಾಜ್ಯೋತ್ಸವ ಅಂಗವಾಗಿ ಇಂದು ಬೆಳಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಜ್ ಪಥ್ ನಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ಮುಖ್ಯ ಅತಿಥಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

ಬ್ರಹ್ಮೋಸ್, ಆಕಾಶ ಕ್ಷಿಪಣಿ ಸೇರಿದಂತೆ ಭಾರತದ ವಾಯುಪಡೆ, ಜಲಪಡೆ, ಸೇನಾ ಪಡೆಗಳ ಶಕ್ತಿ ಪ್ರದರ್ಶನ, ಬಾನಿನಲ್ಲಿ ಯುದ್ಧ ವಿಮಾನಗಳಿಂದ ಚಿತ್ತಾರ, ಮೋಟಾರು ಬೈಕ್ ಸಾಹಸಗಳು ಗಮನ ಸೆಳೆದವು. ಕರಾವಳಿ ಕಾವಲು ಪಡೆ, ಸಿಆರ್​ಪಿಎಫ್, ಎನ್​ಸಿಸಿ, ಸ್ಕೌಟ್ಸ್, ಗೈಡ್ಸ್ ಮತ್ತಿತರರು ಪಾಲ್ಗೊಂಡ ಪೆರೇಡ್​ನಲ್ಲಿ 17 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳ ಸಾಧನೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು ಗಮನ ಸೆಳೆದವು. ಕರ್ನಾಟಕದ ಕಾಫಿ ಕುರಿತ ಸ್ತಬ್ಧಚಿತ್ರ ವಿಶೇಷವಾಗಿತ್ತು. ಇದೇ ಮೊದಲ ಬಾರಿಗೆ ನಿವೃತ್ತ ಯೋಧರ ಸ್ತಬ್ಧಚಿತ್ರ ಸಹ ಪಾಲ್ಗೊಂಡಿತ್ತು.

ಮೊದಲ ಬಾರಿ ಫ್ರೆಂಚ್ ಮಿಲಿಟರಿಯಿಂದ ಪರೇಡ್
67ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ದೆಹಲಿ ರಾಜ್ ಪಥ್ ನಲ್ಲಿ ಐತಿಹಾಸಿಕವಾಗಿ ಮೊದಲ ಬಾರಿಗೆ ಫ್ರೆಂಚ್ ಆರ್ಮಿಯ 123 ಮಂದಿ ತಂಡ ಆಕರ್ಷಕ ಪರೇಡ್ ನಡೆಸಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗೌರವ ವಂದನೆ ಸ್ವೀಕರಿಸಿದರು. ಅಲ್ಲದೇ ಈ ಬಾರಿ ಮುಖ್ಯ ಅತಿಥಿಯಾಗಿದ್ದ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಆಕರ್ಷಕ ಪರೇಡ್, ಪಥಸಂಚಲನ ವೀಕ್ಷಿಸಿ, ಚಪ್ಪಾಳೆ ತಟ್ಟಿದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯೂ ಉಪಸ್ಥಿತರಾಗಿದ್ದರು.

Write A Comment