ನವದೆಹಲಿ (ಪಿಟಿಐ): ನಕಲಿ ಪಾಸ್‌ಪೋರ್ಟ್ ಪ್ರಕರಣ ಸಂಬಂಧ ಭೂಗತ ಪಾತಕಿ ಛೋಟಾ ರಾಜನ್ ಹಾಗೂ ಬೆಂಗಳೂರು ಪಾಸ್‌ಪೋರ್ಟ್ ಕಚೇರಿಯ ಮೂವರು ನಿವೃತ್ತ ಅಧಿಕಾರಿಗಳ ವಿರುದ್ಧ ಸಿಬಿಐ ಮಂಗಳವಾರ ಚಾರ್ಜ್‌ಶೀಟ್ ಸಲ್ಲಿಸಿದೆ.
ಇಲ್ಲಿನ ಪಟಿಯಾಲ ಹೌಸ್‌ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಸಿಬಿಐ ವಕ್ತಾರ ಆರ್.ಕೆ.ಗೌರ್ ತಿಳಿಸಿದ್ದಾರೆ.
ರಾಜೇಂದ್ರ ಸದಾಶಿವ ನಿಕಲಾಜೆ ಅಲಿಯಾಸ್ ಛೋಟಾ ರಾಜನ್ ಹಾಗೂ ನಿವೃತ್ತ ಪಾಸ್‌ಪೋರ್ಟ್ ಅಧಿಕಾರಿಗಳಾದ ಜಯಶ್ರೀ ರಾಹತೆ, ದೀಪಕ್ ನಟವರ್‌ಲಾಲ್ ಷಾ ಹಾಗೂ ಲಲಿತಾ ಲಯಮೊನ್ ಅವರನ್ನು ಆರೋಪಿಗಳೆಂದು ದೋಷಾರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತನಿಖಾ ಸಂಸ್ಥೆಯು ನಾಲ್ವರ ವಿರುದ್ಧವೂ ಕ್ರಿಮಿನಲ್ ಪಿತೂರಿ, ನಕಲಿ, ವಂಚನೆ ಆರೋಪಗಳನ್ನು ಹೊರಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೋಷಾರೋಪ ಪಟ್ಟಿ ದಾಖಲಿಸಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
ಏನಿದು ಪ್ರಕರಣ: ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರಾಜನ್, ನಕಲಿ ಪಾಸ್‌ಪೋರ್ಟ್ ಹಾಗೂ ಪ್ರವಾಸಿ ವೀಸಾ ಪಡೆದು 2003ರ ಸೆಪ್ಟೆಂಬರ್ 22ರಂದು ಆಸ್ಟ್ರೇಲಿಯಾಕ್ಕೆ ಪರಾರಿಯಾಗಿದ್ದ.
ರಾಜನ್, ಕರ್ನಾಟಕದ ಮಂಡ್ಯ ಜಿಲ್ಲೆಯ ಆಜಾದ್ ನಗರ ವಿಳಾಸ ನೀಡಿ, ಮೋಹನ್ ಕುಮಾರ್ ಎಂಬುವವರ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದಿದ್ದ.
ಈ ಆರೋಪದಡಿ ಸಿಬಿಐ, ರಾಜನ್ ಹಾಗೂ ಅನಾಮಿಕ ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
2015ರ ತನಕ ಆಸ್ಟ್ರೇಲಿಯಾಯೇ ನೆಲೆಸಿದ್ದ ರಾಜನ್, ಅಕ್ಟೋಬರ್ 25ರಂದು ಬಾಲಿಗೆ ತೆರಳಿದ್ದ. ಆದರೆ, ರೆಡ್‌ಕಾರ್ನರ್ ನೋಟಿಸ್ ಹಿನ್ನೆಲೆಯಲ್ಲಿ ಆತನನ್ನು ಇಂಡೊನೇಷ್ಯಾದ ಪೊಲೀಸರು ವಶಕ್ಕೆ ಪಡೆದಿದ್ದರು.
ಬಳಿಕ ಅಲ್ಲಿಂದ 2015ರ ನವೆಂಬರ್ 6ರಂದು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಸದ್ಯ ರಾಜನ್ ತಿಹಾರ್ ಜೈಲಿನಲ್ಲಿದ್ದಾನೆ.