ಗಾಂಧಿನಗರ್(ಪಿಟಿಐ): ಜನ ಕಲ್ಯಾಣ ಕಾಯ್ದೆಗಳ ಅನುಷ್ಠಾನ ನಿರ್ಲಕ್ಷ್ಯದ ಬಗ್ಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ದಿನದ ಬಳಿಕ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಗೆ ಸಿದ್ಧತೆ ನಡೆಸಲಾಗಿದೆ ಎಂದು ಗುಜರಾತ್ ಸರ್ಕಾರ ಮಂಗಳವಾರ ಹೇಳಿದೆ.
‘ಗುಜರಾತ್ ಸರ್ಕಾರ ಆಹಾರ ಭದ್ರತೆ ಕಾಯ್ದೆ ಜಾರಿಗೆ ಸಿದ್ಧತೆ ನಡೆಸಿದೆ. ಈಗಾಗಲೇ ಫಲಾನುಭವಿಗಳನ್ನು ಗುರುತಿಸಲಾಗಿದೆ. ಕಾಯ್ದೆಯ ನಿಯಮಾನುಸಾರ ಅರ್ಹ ಫಲಾನುಭವಿಗ ಪಟ್ಟಿಯನ್ನು ಗ್ರಾಮಗಳು ಮತ್ತು ನಗರಗಳಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಕೋರಲಾಗಿದೆ’ ಎಂದು ಗುಜರಾತ್ ಸರ್ಕಾರದ ವಕ್ತಾರ ನಿತಿನ್ ಪಾಟೀಲ್ ತಿಳಿಸಿದರು.
ಈವರೆಗೆ ಎಲ್ಲಾ ಹಳ್ಳಿಗಳಲ್ಲಿ ಸಿದ್ಧತೆಯ ಪ್ರಕ್ರಿಯೆಗಳು ಮುಗಿದಿವೆ. ನಗರ ಮತ್ತು ಪಟ್ಟಣಗಳಲ್ಲಿ ಬಾಕಿ ಇರುವ ಸಿದ್ಧತೆಗಳು ಸುಪ್ರೀಂ ಕೋರ್ಟ್ ಫೆ. 17ರಂದು ನಡೆಸುವ ವಿಚಾರಣೆ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಸೇರಿದಂತೆ ಸಂಸತ್ತು ರಚಿಸಿರುವ ಹಲವು ಜನ ಕಲ್ಯಾಣ ಕಾಯ್ದೆಗಳನ್ನು ಗುಜರಾತ್ ಹಾಗೂ ಇನ್ನೂ ಕೆಲವು ರಾಜ್ಯಗಳು ಜಾರಿ ಮಾಡದಿರುವ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಸಂಸತ್ ಏನು ಮಾಡುತ್ತಿದೆ? ಗುಜರಾತ್ ಭಾರತ ಗಣರಾಜ್ಯದ ಭಾಗವಲ್ಲವೆ? ಕಾಯ್ದೆಯ ವ್ಯಾಪ್ತಿ ಇಡೀ ದೇಶ ಎಂದು ಹೇಳಲಾಗಿದ್ದರೂ ಗುಜರಾತ್ ಆ ಕಾಯ್ದೆಯನ್ನು ಜಾರಿ ಮಾಡಲಿಲ್ಲ ಎಂದರೆ ಏನು ಅರ್ಥ ಎಂದು ಖಾರವಾಗಿ ಪ್ರಶ್ನಿಸಿತ್ತು.