ನವದೆಹಲಿ(ಪಿಟಿಐ): ಸಲಿಂಗಕಾಮ ಕಾನೂನು ಬದ್ಧ ಎಂದಿದ್ದ ದೆಹಲಿ ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ಮರುಪರಿಶೀಲನೆಗೆ ಸಲ್ಲಿಸಿದ್ದ ಕ್ಯೂರೇಟಿವ್ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದೆ.
ಸಲಿಂಗ ಕಾಮ ಕಾನುನು ಬದ್ಧ ಎಂದು ದೆಹಲಿ ಹೈಕೋರ್ಟ್ 2013ರಲ್ಲಿ ತೀರ್ಪು ನೀಡಿತ್ತು. ‘ಸಲಿಂಗ ಕಾಮ ಕ್ರಿಮಿನಲ್ ಅಪರಾಧ’ ಎಂದು ಹೇಳಿದ್ದ ಸುಪ್ರೀಂ ಕೋರ್ಟ್ ಈ ತೀರ್ಪನ್ನು ರದ್ದು ಗೊಳಿಸಿತ್ತು.
ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲನೆ ಮಾಡಬೇಕು ಎಂದು ಕ್ಯೂರೇಟಿವ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಿದೆ.
‘ಭಾರತೀಯ ದಂಡ ಸಂಹಿತೆ(ಐಪಿಸಿ)ಯ 377ನೇ ಸೆಕ್ಷನ್ ಯಾವುದೇ ರೀತಿಯ ಅಸ್ವಾಭಾವಿಕ ಲೈಂಗಿಕತೆ ಅಪರಾಧ ಎನ್ನುತ್ತದೆ. ಅಂದರೆ ಪರಸ್ಪರ ಒಪ್ಪಿಗೆ ಇದ್ದರೂ ಸಹಿತ ಅಸ್ವಾಭಾವಿಕವಾಗಿ ಒಬ್ಬ ಗಂಡಸು ಮತ್ತೊಬ್ಬ ಗಂಡಸಿನ ಜತೆ, ಹೆಣ್ಣು–ಹೆಣ್ಣಿನ ಜತೆ ಅಥವಾ ಪ್ರಾಣಿಗಳ ಜತೆ ಕಾಮಕೇಳಿ ಅಥವಾ ರತಿಕ್ರೀಡೆಯಲ್ಲಿ ತೊಡಗುವುದು 377ನೇ ಸೆಕ್ಷನ್ ಪ್ರಕಾರ ಅಪರಾಧ’.
ಆದರೆ, ಸ್ವಾಭಾವಿಕವಾದ ಸಲಿಂಗ ಕಾಮ ಅಪರಾಧ ಹೇಗಾಗುತ್ತದೆ. ಸಂವಿಧಾನಕ್ಕೆ ವಿರೋಧಿಯಾದ ಈ ಸೆಕ್ಷನ್ ತೆಗೆದುಹಾಕಬೇಕು ಎನ್ನುವುದು ಸಲಿಂಗ ಕಾಮದ ಮಂದಿಯ ಬೇಡಿಕೆಯಾಗಿತ್ತು.
‘ಸಲಿಂಗ ಕಾಮ ಕ್ರಿಮಿನಲ್ ಅಪರಾಧ’ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ‘ಸಲಿಂಗ ಕಾಮಿ’ಗಳು ಒಕ್ಕೊರಲ ಆಕ್ರೋಶ ವ್ಯಕ್ತಪಡಿಸಿದ್ದರು. ಆ ವರ್ಗದ ಪರ ಹೋರಾಡುವ ಸಂಘಟನೆಗಳೂ ಆಕ್ಷೇಪ ಎತ್ತಿದ್ದವು.
‘ಲೈಂಗಿಕ ದೌರ್ಜನ್ಯ ಅಥವಾ ಹದಿನೆಂಟು ದಾಟದವರು ಸೆಕ್ಸ್ ನಲ್ಲಿ ಭಾಗಿಯಾದರೆ ತಪ್ಪು. ಆದರೆ ವಯಸ್ಕ ಗಂಡು–ಹೆಣ್ಣು ಅಥವಾ ಗಂಡು–ಗಂಡು, ಹೆಣ್ಣು– ಹೆಣ್ಣು ಮಧ್ಯೆ ಪರಸ್ಪರ ಸಹಮತದ ಸೆಕ್ಸ್ ಅನೈಸರ್ಗಿಕ, ಕಾನೂನುಬಾಹಿರ ಹೇಗಾಗುತ್ತದೆ? ಎನ್ನುವುದು ‘ಸಲಿಂಗ ಕಾಮಿ’ಗಳ ಪ್ರಶ್ನೆ.