ನವದೆಹಲಿ: ಯುಪಿಎ ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್ಆರ್ಇಜಿಎ) ಯೋಜನೆಯನ್ನು ಕೇಂದ್ರ ಸರ್ಕಾರ ಹೊಗಳಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ‘ರಾಜಕೀಯ ವಿವೇಚನೆಯ (ಬುದ್ಧಿವಂತಿಕೆ) ಜ್ವಲಂತ ಉದಾಹರಣೆ ಎಂದು ಕಾಂಗ್ರೆಸ್ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಚುಚ್ಚಿದ್ದಾರೆ.
ಯುಪಿಎ ಜಾರಿಗೆ ತಂದಿದ್ದ ಉದ್ಯೋಗ ಖಾತರಿ ಯೋಜನೆಯು ‘ಕಾಂಗ್ರೆಸ್ ವೈಫಲ್ಯದ ಜೀವಂತ ಸ್ಮಾರಕ’ ಎಂಬುದಾಗಿ ಕರೆದಿದ್ದ ಮೋದಿ ಆಡಳಿತ ಈಗ ಯೋಜನೆಯ ಯಶಸ್ಸನ್ನು ಒಪ್ಪಿಕೊಳ್ಳಬೇಕಾಗಿ ಬಂದಿದೆ ಎಂದು ಅವರು ಹೇಳಿದ್ದಾರೆ.
‘ಎನ್ಆರ್ಇಜಿಎ ಯನ್ನು ಕಾಂಗ್ರೆಸ್ ವೈಫಲ್ಯದ ಜೀವಂತ ಸ್ಮಾರಕ ಎಂಬುದಾಗಿ ಬಣ್ಣಿಸಿದ ಬಳಿಕ ಈಗ ಅದೇ ಸರ್ಕಾರ ಯೋಜನೆಯನ್ನು ರಾಷ್ಟ್ರದ ಹೆಮ್ಮೆ ಎಂಬುದಾಗಿ ಹೇಳುತ್ತಿರುವುದು ಮೋದಿಜಿಯವರ ರಾಜಕೀಯ ಬುದ್ಧಿವಂತಿಕೆಯ ಉಜ್ವಲ ಉದಾಹರಣೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಟ್ವೀಟ್ ಮಾಡಿದ್ದಾರೆ.
ಕಳೆದ ಮುಂಗಡಪತ್ರ ಅಧಿವೇಶನದಲ್ಲಿ ಪ್ರಧಾನಿ ಮೋದಿ ‘ನಾನು ಯೋಜನೆಗೆ ತೆರೆ ಎಳೆಯುತ್ತೇನೆ ಎಂದು ನೀವು ಯೋಚಿಸುತ್ತಿದ್ದೀರಾ? ರಾಜಕೀಯ ವಿವೇಚನೆ ಹಾಗೆ ಮಾಡಲು ನನ್ನನ್ನು ಬಿಡುವುದಿಲ್ಲ. 60 ವರ್ಷಗಳಲ್ಲಿ ದಾರಿದ್ರ್ಯ ನಿವಾರಣೆ ನಿಟ್ಟಿನ ನಿಮ್ಮ ವೈಫಲ್ಯದ ಜೀವಂತ ಸ್ಮಾರಕ ಇದು. ‘ಭಾಜಾ ಭಜಂತ್ರಿಯೊಂದಿಗೆ ನಾನು ಈ ಯೋಜನೆಯನ್ನು ಮುಂದುವರೆಸುತ್ತೇನೆ’ ಎಂದು ಮೋದಿ ಹೇಳಿದ್ದರು. ಕಾಂಗ್ರೆಸ್ ಪಕ್ಷದ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರೂ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿಯನ್ನು ಟೀಕಿಸಿದ್ದಾರೆ.