ನವದೆಹಲಿ, ಫೆ.7- ಭೂಕಂಪದಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭ ಕುಸಿದು ಬೀಳುವ ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ತುರ್ತು ರಕ್ಷಣೆಗೆ ಅನುಕೂಲವಾಗುವಂತೆ, ಅತ್ಯಂತ ಕಠಿಣ ತರಬೇತಿ ಪಡೆದ 162 ಶ್ವಾನಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ(ಎನ್‌ಡಿಆರ್‌ಎಫ್) ದಳಕ್ಕೆ ಸೇರ್ಪಡೆ ಮಾಡಲು ಸರ್ಕಾರ ಮುಂದಾಗಿದೆ. ಕಳೆದ ವರ್ಷ ನೇಪಾಳದಲ್ಲಿ ಸಂಭವಿಸಿದ ಭೂಕಂಪ, ದೇಶದ ಉತ್ತರಾಖಂಡ್, ಜಮ್ಮು-ಕಾಶ್ಮೀರ, ಚೆನ್ನೈ ನಗರಗಳಲ್ಲಿ ಉಂಟಾದ ಪ್ರಕೃತಿ ವಿಕೋಪಗಳ ವೇಳೆ ಎನ್‌ಡಿಆರ್‌ಎಫ್ ದಳ ಪ್ರಮುಖ ಪಾತ್ರವಹಿಸಿ, ಸಾವಿರಾರು ಜನರನ್ನು ರಕ್ಷಿಸಿತ್ತು.
ತಮ್ಮ ಈ ಕಾರ್ಯದಲ್ಲಿ ಹೆಚ್ಚಿನ ಅನುಕೂಲವಾಗುವಂತೆ ಶೋಧ ಮತ್ತು ರಕ್ಷಣಾ ಕಾರ್ಯಗಳಲ್ಲಿ ತಮಗೆ ನೆರವು ನೀಡಲು 162 ಶ್ವಾನಗಳ ಹೊಸ ತಂಡಕ್ಕೆ ತರಬೇತಿ ನೀಡಲಾಗುತ್ತಿದೆ. ಈಗ ಈ 162 ನಾಯಿಗಳ ತರಬೇತಿ ಪೂರ್ಣಗೊಂಡಿದ್ದು, ಇವುಗಳನ್ನೆಲ್ಲ ಎನ್‌ಡಿಆರ್‌ಎಫ್ ದಳಕ್ಕೆ ಸೇರಿಸುವ ಹಂತದಲ್ಲಿದೆ. ನಾವು ವಿಶಿಷ್ಟವಾಗಿ ತರಬೇತಿ ನೀಡಿರುವ ಅರ್ಬನ್ ಸರ್ಚ್ ಆಂಡ್ ರೆಸ್ಕ್ಯೂ(ಯುಎಸ್‌ಎಆರ್) ತಂಡದ ಶ್ವಾನಗಳು, ವಿಶೇಷ ಸವಾಲೆದುರಿಸುವ ಸಂದರ್ಭ ಎನ್‌ಡಿಆರ್‌ಎಫ್ ತಂಡಕ್ಕೆ ಸೇರ್ಪಡೆಮಾಡಲಾಗುವುದು ಎಂದು ಮಹಾ ನಿರ್ದೇಶಕ ಒ.ಪಿ.ಸಿಂಗ್ ಹೇಳಿದ್ದಾರೆ.