ನವದೆಹಲಿ: ಬಾಲಿವುಡ್ ಮತ್ತು ಕ್ರಿಕೆಟ್ ರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಡುವಿನ ಸ್ನೇಹ-ಸಂಬಂಧ ಕೊನೆಗೂ ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಖಾಸಗಿ ದೈನಿಕವೊಂದು ವರದಿ ಮಾಡಿರುವಂತೆ ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಿನ ಸ್ನೇಹ ಸಂಬಂಧಗಳ ಸುದ್ದಿ ನಿಜವಾಗಿದ್ದು, ಇವರಿಬ್ಬರೂ ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದಾರೆ. ಆ ಮೂಲಕ ಸತತ ಮೂರು ವರ್ಷಗಳ ಸ್ನೇಹ-ಸಂಬಂಧವನ್ನು ಜೋಡಿ ಮುರಿದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ವರದಿಯಲ್ಲಿ ತಿಳಿಸಿರುವಂತೆ ಕೊಹ್ಲಿ ಮತ್ತು ಅನುಷ್ಕಾ ಅವರ ಸ್ನೇಹ-ಸಂಬಂಧ ಮುರಿದು ಬೀಳಲು ಮದುವೆ ಪ್ರಸ್ತಾಪವೇ ಕಾರಣ ಎಂದು ಹೇಳಲಾಗುತ್ತಿದೆ. ಕ್ರಿಕೆಟಿಗ ವಿರಾಟ್ ಕೊಹ್ಲಿ-ಅನುಷ್ಕಾರನ್ನು ಮದುವೆಯಾಗಲು ಒತ್ತಡ ಹೇರಿದ್ದರು. ಆದರೆ ಪ್ರಸ್ತುತ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅನುಷ್ಕಾ ಶರ್ಮಾ ಮತ್ತಷ್ಟು ವರ್ಷಗಳ ಕಾಲ ವೃತ್ತಿ ಬದುಕಿನಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದರು. ಈ ಸಂಬಂಧ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಈ ಜೋಡಿ ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಟ್ವಿಟರ್ ನಲ್ಲಿ ಅನುಷ್ಕಾ ಖಾತೆಯನ್ನು ಅನ್ ಫಾಲೋ ಮಾಡಿದ ಕೊಹ್ಲಿ
ಇನ್ನು ಇದಕ್ಕೆ ಇಂಬು ನೀಡುವಂತೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅನುಷ್ಕಾ ಶರ್ಮಾ ಅವರ ಖಾತೆಯನ್ನು ಅನ್ ಫಾಲೋ ಮಾಡಿದ್ದಾರೆ. ಕೇವಲ ಟ್ವಿಟರ್ ಮಾತ್ರವಲ್ಲದೇ ಅನುಷ್ಕಾಗೆ ಸಂಬಂಧಿಸಿದ ಎಲ್ಲ ಸಾಮಾಜಿಕ ಜಾಲತಾಣಗಳನ್ನು ಕೂಡ ಕೊಹ್ಲಿ ಅನ್ ಫಾಲೋ ಮಾಡುವ ಮೂಲಕ ತಮ್ಮ ಸ್ನೇಹ-ಸಂಬಂಧ ಮುರಿದ ವಿಚಾರವನ್ನು ಜಗತ್ತಿಗೇ ತಿಳಿಸಿದ್ದಾರೆ ಎಂದು ವರದಿ ಮಾಡಲಾಗಿದೆ.
ಬಾಲಿವುಡ್ ಸುದ್ದಿಗೆ ಸಂಬಂಧಿಸಿದ ಖಾಸಗಿ ವೆಬ್ ತಾಣವೊಂದು ಈ ಬಗ್ಗೆ ವರದಿ ಮಾಡಿದ್ದು, ಪರಸ್ಪರ ಬೇರೆಯಾದ ಬಳಿಕ ಇಬ್ಬರೂ ತಮ್ಮ ತಮ್ಮ ವೃತ್ತಿ ಬದುಕಿನತ್ತ ಗಮನ ಹರಿಸಿಲು ನಿರ್ಧರಿಸಿದ್ದಾರೆ ಎಂದು ಹೇಳಿದೆ. ಆದರೆ ಪ್ರಸ್ತುತ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರೂ ಸಹ ವಿರಾಟ್ ಕೊಹ್ಲಿಗೆ ಮಾತ್ರ ತಮ್ಮ ಸಂಬಂಧ ಮುರಿದುಕೊಳ್ಳಲು ಇಷ್ಟವಿಲ್ಲವಂತೆ. ಹೀಗಾಗಿ ಮತ್ತೊಂದಷ್ಟು ಸಮಯದ ಬಳಿಕ ಮತ್ತೆ ಅನುಷ್ಕಾ ಶರ್ಮಾರೊಂದಿಗೆ ವಿವಾಹ ಪ್ರಸ್ತಾಪ ಮುಂದಿಡಲು ಬಯಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆಸ್ಟ್ರೇಲಿಯಾ ಪ್ರವಾಸದ ಬಳಿಕ ಪರಸ್ಪರ ಕೈ-ಕೈಹಿಡಿದು ವಿಮಾನ ನಿಲ್ದಾಣದಲ್ಲಿ ಪೋಸ್ ನೀಡಿದ್ದ ಈ ಜೋಡಿ ಇದೀಗ ಮಾಧ್ಯಮಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದರೂ ಈ ಬಗ್ಗೆ ಸ್ಪಷ್ಟನೆ ನೀಡದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಪ್ರಸ್ತುತ ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಚಿತ್ರದಲ್ಲಿ ಅನುಷ್ಕಾ ತೊಡಗಿಸಿಕೊಂಡಿದ್ದು, ರಣ್ ಬೀರ್ ಕಪೂರ್ ರೊಂದಿಗಿನ ಎ ದಿಲ್ ಹೈ ಮುಷ್ಕಿಲ್ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.