ರಾಷ್ಟ್ರೀಯ

ಸಂವಿಧಾನದ ಪಾವಿತ್ರ್ಯ ಕಾಪಾಡಿ: ರಾಜ್ಯಪಾಲರಿಗೆ ರಾಷ್ಟ್ರಪತಿ ಮುಖರ್ಜಿ ಸಲಹೆ

Pinterest LinkedIn Tumblr

pvec10feb16h presidentನವದೆಹಲಿ (ಪಿಟಿಐ): ಸಂವಿಧಾನಬದ್ಧ ಸ್ಥಾನ ಹೊಂದಿರುವವರು ಸಂವಿಧಾನದ ಪಾವಿತ್ರ್ಯ ಕಾಪಾಡಬೇಕು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕಿವಿಮಾತು ಹೇಳಿದರು.

ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ಎರಡು ದಿನಗಳ ರಾಜ್ಯಪಾಲರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಸಂವಿಧಾನದಲ್ಲಿನ ಪವಿತ್ರ ತತ್ವಗಳ ನಿಷ್ಠೆಗೆ ಬದ್ಧರಾಗಿರುವುದು ಪ್ರಾಥಮಿಕ ಕರ್ತವ್ಯ. ಇದು ನಮ್ಮ ಮಹತ್ವಾಕಾಂಕ್ಷೆಗಳನ್ನು ಪ್ರತಿಫಲಿಸುವ ಮತ್ತು ಅವುಗಳನ್ನು ಸಾಧಿಸಲು ಇರುವ ಮಾರ್ಗ’ ಎಂದರು.

‘ಪೂಜ್ಯ ಗ್ರಂಥದ ಪಾವಿತ್ರ್ಯವನ್ನು ಕಾಪಾಡುವುದು ಸಂವಿಧಾನಾತ್ಮಕ ಹುದ್ದೆ ಹೊಂದಿರುವ ನಮ್ಮೆಲ್ಲರ ಜವಾಬ್ದಾರಿ’ ಎಂದು ಹೇಳಿದರು.
ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಸಂಬಂಧಿಸಿದಂತೆ ರಾಜ್ಯಪಾಲ ಜೆ.ಪಿ. ಜ್ಯೋತಿ ಪ್ರಸಾದ್‌ ರಾಜ್‌ಖೋವಾ ಅವರು ಎಬ್ಬಿಸಿದ ವಿವಾದದ ಕಾರಣ ಪ್ರಣವ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಶಾಂತಿ ಮಾತುಕತೆಯೇ ಮಾರ್ಗ: ‘ಜಾಗತಿಕ ಆರ್ಥಿಕ ಹಿಂಜರಿಕೆ, ಹವಾಮಾನ ವೈಪರೀತ್ಯ ಮತ್ತು ಆಂತರಿಕ ಹಾಗೂ ಬಾಹ್ಯ ಭದ್ರತೆ ವಿಚಾರದಲ್ಲಿ ನಾವು ಸವಾಲುಗಳನ್ನು ಎದುರಿಸಿದ್ದೇವೆ. ಅಂತರರಾಷ್ಟ್ರೀಯ ಗಡಿಭಾಗಗಳಲ್ಲಿನ ರಾಜ್ಯಗಳು ಉಗ್ರರ ದಾಳಿಗಳಿಂದ ತೊಂದರೆ ಅನುಭವಿಸುತ್ತಿವೆ. ಈ ದಾಳಿಗಳಲ್ಲಿ ಬಾಹ್ಯ ಸಂಪರ್ಕ ಸ್ಪಷ್ಟವಾಗಿದೆ’ ಎಂದು ಹೇಳಿದರು.

‘ಬಾಹ್ಯ ಭದ್ರತಾ ವಾತಾವರಣದಲ್ಲಿನ ಅಸ್ಥಿರತೆಯು ನಮ್ಮ ರಕ್ಷಣಾ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳುವ ಹೊಣೆಯನ್ನು ನೀಡಿದೆ. ಇದೇ ವೇಳೆ, ಬಾಕಿ ಉಳಿದಿರುವ ಎಲ್ಲಾ ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಶಾಂತಿಯುತ ಮಾತುಕತೆ ಮತ್ತು ವ್ಯವಹಾರಗಳ ಮೂಲಕವೇ ಪರಿಹರಿಸಿಕೊಳ್ಳುವ ಪ್ರಯತ್ನವನ್ನೂ ಮುಂದುವರಿಸಬೇಕು’ ಎಂದರು.

ಬರ ನಿರ್ವಹಣೆ: ‘ಮಳೆಯ ಕೊರತೆಯಿಂದಾಗಿ ದೇಶವು ಸತತ ಎರಡು ವರ್ಷದಿಂದ ಬರದ ಕೆಟ್ಟ ಸನ್ನಿವೇಶವನ್ನು ಎದುರಿಸುತ್ತಿದೆ. ಮತ್ತೊಮ್ಮೆ ಇದೇ ರೀತಿಯ ಒಣ ವಾತಾವರಣ ಕೃಷಿ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಅಪಾಯವಿದೆ. ರೈತರ ಸಂಕಷ್ಟಗಳಿಗೆ ಸಮರೋಪಾದಿಯಲ್ಲಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’ ಎಂದರು.

‘ವಾತಾವರಣದ ಅಸಮತೋಲನದಿಂದ ಚೇತರಿಸಿಕೊಳ್ಳಲು ನಮ್ಮ ಕೃಷಿ ಸಂಶೋಧನಾ ಸಂಸ್ಥೆಗಳು ಬರದಲ್ಲಿಯೂ ಬೆಳೆಯುವಂತಹ ಆಹಾರ ಬೆಳೆಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಸಲಹೆ ನೀಡಿದರು.

ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್‌, ಸ್ಮಾರ್ಟ್‌ ಸಿಟಿ ಯೋಜನೆ, ಸ್ವಚ್ಛ ಭಾರತ ಮುಂತಾದ ಯೋಜನೆಗಳ ಯಶಸ್ಸಿಗೆ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಅಗತ್ಯವನ್ನು ಒತ್ತಿ ಹೇಳಿದರು.

‘ಆಯಾ ರಾಜ್ಯಗಳ ಸಂವಿಧಾನಬದ್ಧ ಮುಖ್ಯಸ್ಥರಾಗಿ ರಾಜ್ಯಪಾಲರು ಪರಿಣಾಮಕಾರಿ ಸಹಕಾರ ನೀಡುವ ನಿಟ್ಟಿನಲ್ಲಿ ಸ್ಫೂರ್ತಿದಾಯಕ ಪಾತ್ರ ನಿರ್ವಹಿಸಬೇಕು’ ಎಂದರು.

‘ಸುಮಾರು 320 ಸರ್ಕಾರಿ ಹಾಗೂ 140 ಖಾಸಗಿ ವಿಶ್ವವಿದ್ಯಾಲಯಗಳಿವೆ. ಈ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ವಿಷಯದಲ್ಲಿಯೂ ರಾಜ್ಯಪಾಲರು ಮಹತ್ವದ ಪಾತ್ರ ವಹಿಸಬಹುದು’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಗೃಹ ಸಚಿವ ರಾಜನಾಥ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್‌ ಪನಗರಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Write A Comment