ನವದೆಹಲಿಗೆ ಬುಧವಾರ ಬಂದ ಅಬುಧಾಬಿ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು.
ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಮತ್ತು ಅಬುಧಾಬಿ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಲಿದ್ದು, ಭಾರತ– ಯುಎಇ ನಡುವೆ ವಾಣಿಜ್ಯ ಮತ್ತು ರಕ್ಷಣಾ ವಲಯದಲ್ಲಿ ಹಲವು ಒಪ್ಪಂದಗಳಿಗೆ ಸಹಿ ಬೀಳಲಿವೆ.
ಯುಎಇಯು ಭಾರತದಲ್ಲಿ 7500 ಕೋಟಿ ಅಮೆರಿಕನ್ ಡಾಲರ್ (ಸುಮಾರು ₹ 5.1 ಲಕ್ಷ ಕೋಟಿ) ಬಂಡವಾಳ ಹೂಡಿಕೆ ಮಾಡುವ ಸಾಧ್ಯತೆ ಇದೆ.
ಯುಎಇ ಜತೆಗಿನ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಸರ್ಕಾರದ ಗುರಿ.
ಪ್ರಧಾನಿ ಸ್ವಾಗತ: ಬುಧವಾರ ಸಂಜೆ ಇಲ್ಲಿನ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಬುಧಾಬಿ ರಾಜಕುಮಾರ ನನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ಹೋದ ವರ್ಷದ ಆಗಸ್ಟ್ ತಿಂಗಳಲ್ಲಿ ಯುಎಇಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಳ್ಳಲು ಅಲ್ ನಹ್ಯಾನ್ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು.
‘ಪ್ರಧಾನಿ ಕನಿಷ್ಠ ಬೆಂಗಾವಲು ಪಡೆಯೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಅವರ ವಾಹನದ ಜತೆ ಆಂಬುಲೆನ್ಸ್ ಮತ್ತು ಕೆಲವೇ ವಾಹನಗಳು ಇದ್ದವು. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಹೀಗೆ ಮಾಡಲಾಗಿತ್ತು’ ಎಂದು ಮೂಲಗಳು ಹೇಳಿವೆ.