ರಾಷ್ಟ್ರೀಯ

ವ್ಯಾಲೆಂಟೇನ್‌ ದಿನಕ್ಕೆ ಟಾಪ್‌ ಫೈವ್‌ ಲವ್‌ಸ್ಪಾಟ್‌

Pinterest LinkedIn Tumblr

6_0ಪ್ರೇಮಿಸಬೇಕು, ಪ್ರೇಮ ಗುಟ್ಟಾಗಿ ಉಳೀಬೇಕು. ಅಟ್‌ಲೀಸ್ಟ್‌ ಮದುವೆ ಆಗೋ ತನಕ ಯಾರಿಗೂ ಗೊತ್ತಾಗಬಾರದು ಅನ್ನೋ ಕಾಲವೊಂದಿತ್ತು. ಆಗೆಲ್ಲ, ಪ್ರೇಮಿಗಳು ಹಳೇ ಕೋಟೆ, ಊರಾಚೆಗಿನ ಬಂಟಮಲೆ, ಸನ್ಯಾಸಿ ಗುಡ್ಡ, ಕಾಳು ಕಣಿವೆ, ಕಳಲೆ ದಿಬ್ಬ ಅಂತ ಯಾರೂ ಬರದ ಜಾಗಕ್ಕೆ ಹೋಗಿ ಒಂದಷ್ಟು ಹೊತ್ತು ಕುಂತು ನಿಂತು ಮಾತಾಡಿ ಬರುತ್ತಿದ್ದರು. ಈಗ ಕಾಲ ಬದಲಾಗಿದೆ. ಪ್ರೇಮಿಗಳು ಅಲ್ಪಸಂಖ್ಯಾತರೂ ಅಲ್ಲ. ಪ್ರೇಮದ ನಿಲ್ದಾಣಗಳೂ ಗುಪ್ತತಾಣಗಳಾಗಿ ಉಳಿದಿಲ್ಲ. ಹಂಗಿದ್ದೂ ಬೆಂಗಳೂರೆಂಬ ಬೆಂಗಳೂರಿನ ಕಾಂಕ್ರೀಟು ಕಾಡಲ್ಲಿ ಎಲ್ಲುಂಟು ಪ್ರೀತಿಯ ಗೂಡು. ಎಲ್ಲಿ ಹುಡುಕೋದು ಪ್ರೇಮದ ಹೆಜ್ಜೆ ಜಾಡು.
ಈ ಪಟ್ಟಿ ನೋಡಿ:

1. ಸ್ಯಾಂಕಿ ಕೆರೆ : ಅನಾದಿಕಾಲದಿಂದಲೂ ಸ್ಯಾಂಕಿ ಕೆರೆದಂಡೆ ಅಸಂಖ್ಯಾತ ಪ್ರೇಮಿಗಳನ್ನು ಪೋಷಿಸಿಕೊಂಡು ಬಂದಿದೆ. ಕಳೆದೊಂದು ದಶಕದಿಂದ ಹೊಸರೂಪ ಪಡೆದಿರುವ ಕೆರೆ, ಅದಕ್ಕೂ ಮುಂಚೆ ಯಾವುದೋ ದಟ್ಟ ಕಾಡಿನ ನಡುವಿನ ಅಚ್ಚೋದ ಸರೋವರದಂತಿತ್ತು. ಈಗಲೂ ಅಷ್ಟೇ, ಕೆರೆದಂಡೆಯಲ್ಲಿ ಕೂತರೆ ಒಂದು ಪಕ್ಕದಲ್ಲಿ ಬಿದಿರು ಬೆಳೆ, ಕಾಡಿನ ಅನುಭವ ಕೊಡುವ ಸಸ್ಯರಾಶಿ, ಮತ್ತೂಂದು ಕಡೆ ವಿಶಾಲವಾಗಿ ಹಬ್ಬಿದ ಸ್ಯಾಂಕಿ ಟ್ಯಾಂಕು. ಮಲ್ಲೇಶ್ವರಂ ಎಯ್‌¤ ಕ್ರಾಸಿನ ಹುಡುಗ, ಶ್ರೀರಾಮಪುರದ ಹುಡುಗಿ ಕೈ ಕೈ ಹಿಡಿದು ನಡಕೊಂಡು ಹೋದರೆ ಅಲ್ಲಿಂದಿಲ್ಲಿಗೆ ಐದಾರು ನಿಮಿಷದ ದೂರ. ಬೆಳಗ್ಗೆ ಆರರಿಂದ ರಾತ್ರಿ ಎಂಟರ ತನಕವೂ ಈ ಕೆರೆದಂಡೆ ಪ್ರೇಮದ ಮಾತಿಗೆ ಮುಕ್ತ ಮುಕ್ತ ಮುಕ್ತ.

2. ಬನ್ನೇರುಘಟ್ಟ: ಅನೇಕರಿಗೆ ಈ ಗಿಜಿಗಿಜಿ ಪ್ರೇಮ ಸರಿಹೊಂದುವುದಿಲ್ಲ. ಇಡೀ ದಿನ ಪ್ರಕೃತಿಯ ನಡುವೆ ಇರಬೇಕು. ಕಾಂಕ್ರೀಟ್‌ ಕಾಡಿನಿಂದ ದೂರ ಇರಬೇಕು. ಒಂಥರ ಬನವಾಸಿಗಳಾಗಬೇಕು ಅನ್ನುವ ಹುಮ್ಮಸ್ಸು ನಗರದ ಜಂಜಡಕ್ಕೆ ಬಲಿಯಾದವರ ಒಳಮನಸ್ಸಿನಲ್ಲಿ ಇರುತ್ತದೆ. ಅಂಥವರಿಗಾಗಿಯೇ ಕೈ ಬೀಸಿ ಕರೆಯುತ್ತಿದೆ ಬನ್ನೇರುಘಟ್ಟ. ಸುಮ್ಮನೆ ಬೆಳಗಾಗೆದ್ದು ಒಂದು ಬಸ್ಸು ಹತ್ತಿಕೊಂಡು ಬನ್ನೇರುಘಟ್ಟಕ್ಕೆ ಹೋಗಿ. ಪ್ರಕೃತಿಯ ಜೊತೆ ಪ್ರೇಮದ ಆಚರಣೆಯೂ ನಡೆಯಲಿ. ಸಫಾರಿ, ಟ್ರೆಕ್ಕಿಂಗು, ದಿನವಿಡೀ ಮಾತು- ಮತ್ತೇನು ಬೇಕು ಹೊಸತು?

3. ಮಾಲ್‌: ಹಳ್ಳಿಯಿಂದ ಬಂದು ಆಗಷ್ಟೇ ಬೆಂಗಳೂರು ಸೇರಿದ ಮಂದಿಗೆ ಕಾಡೆಂದರೆ ಅಂಥ ಪ್ರೀತಿ ಇರದು. ಕೆರೆದಂಡೆ ಊರಲ್ಲೇ ನೋಡಿ ನೋಡಿ ಸಾಕಾಗಿರುತ್ತದೆ. ಅದರಿಂದ ಹೊರಗೆ ಬರಬೇಕು ಅನ್ನುವ ಅದಮ್ಯ ಆಸೆ ಹೊತ್ತವರಿಗೆಂದೇ ಕಾದಿದೆ ಬೆಂಗಳೂರಿನಲ್ಲಿ ಒಂದೊಂದು ಏರಿಯಾದಲ್ಲೂ ತಲೆಯೆತ್ತಿರುವ ಶಾಪಿಂಗ್‌ ಮಾಲುಗಳು. ಚೆಂದದ ಉಡುಗೆ ತೊಡುಗೆ, ಕಿವಿಗೊಂದು ಇಯರ್‌ ಫೋನು, ಅದರೊಳಗೆ ಪಾಪ್‌ ಪ್ರೇಮಗೀತೆ, ತಾನಾಗಿಯೇ ಏರೋ ಮೆಟ್ಟಲು, ಕಣ್ಣು ತುಂಬುವ ಬಣ್ಣ. ಕೈ ಬೀಸಿ ಕರೆಯುವ ಡೈನ್‌ ಇನ್‌, ಡೈನ್‌ ಔಟ್‌ ರೆಸ್ಟುರಾಗಳು, ಕಣ್ಣಲ್ಲೇ ಕರಗುವ ಐಸ್‌ ಕ್ರೀಮು. ಫೋರಮ್ಮು, ಮಂತ್ರಿ, ಗರುಡಾ, ಮೀನಾಕ್ಷಿ, ಸೆಂಟ್ರಲ್‌- ಹೀಗೆ ಮಾಲ್‌ಗ‌ಳಿಗೆ ಕೊರತೆಯಿಲ್ಲ. ಅಲ್ಲಿ ಪ್ರೇಮದ ಕಮಾಲ್‌ ನಡೆಯುವುದರಲ್ಲೂ ಅನುಮಾನವಿಲ್ಲ. ಅಂದ ಹಾಗೆ ಇದು ಕೊಂಚ ದುಬಾರಿ ನಿವೇದನೆ!

4. ರೆಸ್ಟುರಾಂಟ್‌: ಕ್ಯಾಂಡಲ್‌ ಲೈಟ್‌ ಡಿನ್ನರ್‌ ರಾತ್ರಿಯ ಮಾತಾಯಿತು. ಹಗಲೇ ಇಂದ್ರಪ್ರಸ್ತ ಧರೆಗಿಳಿದಿರಬೇಕು. ಸುತ್ತಲೂ ಹಿತವಾದ ಬೆಳಕು, ಹಿತವಾದ ಸಂಗೀತ, ರುಚಿಯಾದ ಊಟ, ಬೇಕಾದಷ್ಟು ಹೊತ್ತು ಕಳೆಯುವ ಅವಕಾಶ. ಅಲ್ಲೇ ಒಂದು ಸೆಲ್ಫಿ, ಊಟದ ನಂತರ ರುಚಿಯಾದ ಕುಲ್ಫಿà. ಹೀಗೆ ಬಿಸಿಲಿಗೆ ಬಾಡದೇ, ಏರ್‌ ಕಂಡೀಷನ್‌x ರೂಮಲ್ಲೇ ಕೂತು ಪ್ರೀತಿಯ ಮಾತನ್ನು ನೆಂಚಿಕೊಂಡು ಫಿಂಗಲ್‌ ಚಿಪುÕ, ಮೆಕ್ಸಿಕನ್‌ ಸಲಾಡು, ಇಟಾಲಿಯನ್‌ ಪಾಸ್ತಾ ಸವೀತೀರೋ ಅದಕ್ಕೂ ಅವಕಾಶ ಉಂಟು. ಉದಾಹರಣೆಗೆ 13 ಫ್ಲೋರು, ಟಾವೋ ಟೆರೇಸಸ್‌, ಬಿಗ್‌ ಬ್ರೂವ್‌ಸ್ಕೀ, ಐ ಆಂಡ್‌ ಮಂಕಿ, ಗ್ರಾಸ್‌ಹಾಪರ್‌, ತಾಜ್‌ ವಿವಾಂತಾ, ಓಂ ಮೇಡ್‌ ಕೆಫೆ… ಆಯ್ಕೆ ನೀವೇ ಮಾಡ್ಕೊಳ್ಳಿ.

5. ಕ್ರಿಯಾಶೀಲ ಪ್ರೇಮ: ಇದೆಲ್ಲ ಬರೀ ಬೋರು. ನಮ್ಮ ಪ್ರೀತಿ ಸಾಹಸಮಯವೂ ಕ್ರಿಯಾಶೀಲವೂ ಆಗಿರಬೇಕು. ಇಡೀ ದಿನ ಚಟುವಟಿಕೆಯಿಂದ ಇರಬೇಕು. ಪೂರ್ತಿ ದಣಿದು ಮನೆ ಸೇರಬೇಕು. ಜೋರಾಗಿ ಚೀರಬೇಕು, ಆಕಾಶದಲ್ಲಿ ಹಾರಾಡುತ್ತಿರಬೇಕು ಅಂತ ಬಯಸೋ ರಿಸ್ಕೀ ಅಡ್ವೆಂಚರಸ್‌ ಪ್ರೇಮಿಗಳು ನೀವಾದಲ್ಲಿ ನೇರವಾಗಿ ವಂಡರ್‌ ಲಾ, ಲುಂಬಿನಿ ಗಾರ್ಡನ್‌ ಥರದ ಜಾಗಕ್ಕೆ ಹೋಗಿ. ಮೈಸೂರಲ್ಲೊಂದು ಫ್ಯಾಂಟಸಿ ಪಾರ್ಕಿದೆ, ಇನ್ನೋವೇಟಿವ್‌ ಫಿಲ್ಮ್ ಸಿಟಿಯಿದೆ. ಅದೂ ಒಂದು ಅನುಭವವೇ.

ಇದಲ್ಲದೇ ತೊಟ್ಟಿಕಲ್ಲು ಜಲಪಾತ, ಮುತ್ಯಾಲ ಮಡು, ನಂದಿ ಬೆಟ್ಟ, ದೇವರಾಯನ ದುರ್ಗ, ಲಾಲ್‌ಬಾಗ್‌, ಕಬ್ಬನ್‌ ಪಾರ್ಕು- ಹೀಗೆ ಬೆಂಗಳೂರಲ್ಲಿ ಜಾಗ ಬೇಕಾದಷ್ಟಿದೆ. ಆರಿಸಿಕೊಳ್ಳಬೇಕಾದವರು ನೀವು. ಆದರೆ ನೆನಪಿಡಿ, ನಿಮ್ಮ ಪ್ರೇಮ ರೆಸ್ಪಾನ್ಸಿಬಲ್‌ ಆಗಿರಲಿ. ನಿಮ್ಮ ಬಾಳಿನ ಹೊಸ ಮನೆಯ ಒಂದೊಂದು ಇಟ್ಟಿಗೆಯನ್ನೂ ನಿಮ್ಮ ನಡೆಯ ಮೂಲಕ ನೀವು ಕಟ್ಟುತ್ತಿರುತ್ತೀರಿ ಅನ್ನೋದು ನೆನಪಿರಲಿ.

-ಉದಯವಾಣಿ

Write A Comment