ನವದೆಹಲಿ: ಪಾಕಿಸ್ತಾನ ಭಯೋತ್ಪಾದಕ ಮುಖಂಡರಾದ ಝಕಿ-ಉರ್-ರೆಹಮಾನ್ ಲಖ್ವಿ, ಹಫೀಜ್ ಸಯ್ಯೀದ್ ಮತ್ತು ಇತರೆ ಲಷ್ಕರ್ ಮುಖಂಡರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳು ಕೇವಲ ಕಣ್ಣೊರೆಸುವ ತಂತ್ರ. ಅಸಲಿಗೆ ಅವರ ವಿರುದ್ಧ ಕ್ರಮ ಅಸಾಧ್ಯ ಎಂದು ಪಾಕಿಸ್ತಾನ ಮೂಲದ ಅಮೆರಕನ್ ಉಗ್ರಗಾಮಿ ಡೇವಿಡ್ ಕೋಲ್ಮನ್ ಹೆಡ್ಲಿ ಹೇಳಿದ್ದಾನೆ.
ಮುಂಬೈಯ ವಿಶೇಷ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಡ್ಲಿಯ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ವೇಳೆ ಹೆಡ್ಲಿ ಸ್ಫೋಟಕ ಮಾಹಿತಿಗಳನ್ನು ಬಾಯಿಬಿಟ್ಟಿದ್ದಾನೆ. ಸತತ ಆರನೇ ದಿನವಾದ ಶನಿವಾರವೂ ಹೆಡ್ಲಿ ವಿಚಾರಣೆ ಮುಂದುವರೆದಿದ್ದು, ಪಾಕಿಸ್ತಾನ ಸರ್ಕಾರ ಭಯೋತ್ಪಾದಕ ಮುಖಂಡರ ವಿರುದ್ಧ ಕೈಗೊಂಡ ಕ್ರಮಗಳು ಕೇವಲ ಕಣ್ಣೊರೆಸುವ ತಂತ್ರ ಎಂದು ಹೆಡ್ಲಿ ಹೇಳಿದ್ದಾನೆ. ಅಲ್ಲದೆ ಅಸಲಿಗೆ ಪಾಕಿಸ್ತಾನದಲ್ಲಿ ಉಗ್ರ ನಾಯಕರ ವಿರುದ್ಧ ಕ್ರಮಗೊಳ್ಳಲು ಸಾಧ್ಯವೇ ಇಲ್ಲ ಎಂದೂ ಹೆಡ್ಲಿ ಅಭಿಪ್ರಾಯಪಟ್ಟಿದ್ದಾನೆ.
“ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳ ಮುಖಂಡರಾದ ಝುಕಿ-ಉರ್-ರೆಹಮಾನ್ ಲಖ್ವಿ, ಹಫೀಜ್ ಸಯೀದ್ ಮತ್ತು ಇತರ ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಸಂಘಟನೆಯ ಸದಸ್ಯರ ವಿರುದ್ಧ ಪಾಕಿಸ್ತಾನ ಫೆಡರಲ್ ತನಿಖಾ ಸಂಸ್ಥೆ ಕೈಗೊಂಡ ಕ್ರಮ ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಪಾಕಿಸ್ತಾನ ಫೆಡರಲ್ ತನಿಖಾ ಸಂಸ್ಥೆ ಕೈಗೊಂಡ ಕ್ರಮ ಕೇವಲ ತೋರಿಕೆಯದ್ದಾಗಿದೆ ಎಂದು ಅಬ್ದುಲ್ ರೆಹಮಾನ್ ಪಾಶಾ (ಪಾಕಿಸ್ತಾನ ಸೇನೆಯ ನಿವೃತ್ತ ಮೇಜರ್) ತನಗೆ ತಿಳಿಸಿದ್ದ’ ಎಂದು ಹೆಡ್ಲಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
“ಮುಂಬೈ ಮೇಲಿನ 26/11ರ ದಾಳಿಯ ಬಳಿಕ ತಾನು ಎಲ್ಇಟಿಯ ಕಮಾಂಡರ್ ಸಾಜಿದ್ ಮೀರ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೆ. ಈ ವೇಳೆ ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ಹೇರಿದ್ದ ನಿರಂತರ ಒತ್ತಡದಿಂದಾಗಿ ನಾನು ಹಫೀಜ್ ಸಯೀದ್ ಮತ್ತು ಝುಕಿ-ಉರ್-ರೆಹಮಾನ್ ಲಖ್ವಿಯ ಸುರಕ್ಷತೆ ಬಗ್ಗೆ ಚಿಂತಿತನಾಗಿದ್ದೆ. ಈ ವೇಳೆ ನಿರ್ದಿಷ್ಟ ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಭಾರತೀಯ ಸೇನೆಗೆ ಯಾರಾದರೂ ಒಬ್ಬರನ್ನು ನಾನು ನೇಮಕ ಮಾಡಬೇಕು ಎಂದೂ ಮೇಜರ್ ಇಕ್ಬಾಲ್ ಬಯಸಿದ್ದ ಎಂದು ಹೆಡ್ಲಿ ಹೇಳಿದ್ದಾನೆ.ಒಟ್ಟಾರೆ ಭಾರತದ ನೆಲದಲ್ಲಿ ಪಾಕಿಸ್ತಾನ ಪ್ರಯೋಜಿತ ಉಗ್ರ ದಾಳಿಗಳ ಕುರಿತು ಹೆಡ್ಲಿ ಒಂದೊಂದಾಗಿ ಬಾಯಿ ಬಿಡುತ್ತಿದ್ದಾನೆ.