ಪಾಟ್ನಾ: ‘ದಯವಿಟ್ಟು ನನ್ನ ಮಗನನ್ನು ಭಯೋತ್ಪಾದಕ ಎಂದು ಕರೆಯಬೇಡಿ’ಎಂದು ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ(ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ತಾಯಿ ಮನವಿ ಮಾಡಿದ್ದಾರೆ.
ಇಂದು ಕನ್ಹಯ್ಯ ಕುಮಾರ್ ಬಂಧನದ ಬಳಿಕ ಇದೇ ಮೊದಲ ಬಾರಿಗೆ ಬಿಹಾರದ ಬೆಗುಸಾರಿ ಜಿಲ್ಲೆಯ ಗ್ರಾಮದಿಂದ ಸುದ್ದಿಸಂಸ್ಥೆಗೆ ದೂರವಾಣಿ ಮೂಲಕ ಮಾತನಾಡಿರುವ ಅವರ ತಾಯಿ ಮೀನಾ ದೇವಿ, ‘ಕನ್ಹಯ್ಯ ಬಂಧನದ ನಂತರ ನಾವು ನಿರಂತರವಾಗಿ ಟಿವಿಯನ್ನು ನೋಡುತ್ತಿದ್ದೇವೆ. ನನ್ನ ಮಗನಿಗೆ ಪೊಲೀಸರು ತುಂಬಾ ಹೊಡೆದಿಲ್ಲ ಎಂದು ಭಾವಿಸುತ್ತೇನೆ. ಆತನ ಬಂಧನದ ನಂತರದ ಪ್ರತಿ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ದಯವಿಟ್ಟು ಆತನನ್ನು ಭಯೋತ್ಪಾದಕ ಎಂದು ಮಾತ್ರ ಕರೆಯಬೇಡಿ. ಕನ್ಹಯ್ಯ ಯಾವತ್ತೂ ನಮಗೆ(ಪಾಲಕರಿಗೆ) ಅಗೌರವ ತೋರಿಲ್ಲ. ದೇಶದ್ರೋಹದ ಕೆಲಸವನ್ನೂ ಆತ ಮಾಡಿಲ್ಲ’ಎಂದು ಹೇಳಿದ್ದಾರೆ.
ಅಂಗನವಾಡಿ ಸಹಾಯಕಿಯಾಗಿರುವ ಮೀನಾ ದೇವಿ, ಮಗನ ಬಂಧನದ ಸುದ್ದಿಯನ್ನು ನೆರೆಮನೆಯ ಟಿವಿಯಲ್ಲಿ ನೋಡಿ ತಿಳಿದುಕೊಂಡಿದ್ದಾರೆ. ಆಕೆಯ ತಿಂಗಳ ಸಂಪಾದನೆ ರು. 3,500. ಕನ್ಹಯ್ಯ ಅವರ ಸಹೋದರ ಮಣಿಕಾಂತನೇ ಕುಟುಂಬಕ್ಕೆ ಏಕೈಕ ಆಸರೆ. ಮೀನಾ ದೇವಿಯ ಪತಿ ಪಾರ್ಶ್ವವಾಯುವಿನಿಂದ ಕಳೆದ 7 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ.
ಇನ್ನು ‘ನನ್ನ ಮಗ ಬಿಜೆಪಿ ವಿರುದ್ಧದ ಹಲವು ಚಳವಳಿಗಳಲ್ಲಿ ಪಾಲ್ಗೊಂಡಿದ್ದ. ಆತನ ಬಂಧನಕ್ಕೆ ಹಿಂದುತ್ವ ರಾಜಕಾರಣವೇ ಕಾರಣ’ಎಂದು ಕನ್ಹಯ್ಯಾ ಅವರ ತಂದೆ ಜೈಶಂಕರ್ ಆರೋಪಿಸಿದ್ದಾರೆ.