ನವದೆಹಲಿ (ಪಿಟಿಐ): ಜೆಎನ್‌ಯು (ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ) ವಿವಾದ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ಸೋಮವಾರ ಪರಸ್ಪರ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿವೆ.
ರಾಜನಾಥ್ ಸಿಂಗ್ ಜೆಎನ್‌ಯು ವಿವಾದವನ್ನು ಕೋಮುವಾದಿಕರಣಗೊಳಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಮತ್ತೊಂದೆಡೆ, ವಿವಾದದ ಚರ್ಚಾ ಅಖಾಡಕ್ಕೆ ಸೋಮವಾರ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಧುಮುಕಿದ್ದಾರೆ.
ತಿವಾರಿ ಕಿಡಿ: ‘ದೇಶಭಕ್ತಿಯ ಪ್ರವಚನ ಪೀಠದಡಿ ಜೆಎನ್‌ಯು ವಿವಾದಕ್ಕೆ ರಾಜನಾಥ್ ಕೋಮುವಾದದ ಸ್ಪರ್ಶ ನೀಡುತ್ತಿದ್ದಾರೆ. ಭಯೋತ್ಪಾದನಾ ಕೃತ್ಯಗಳನ್ನು ನಡೆಸಿರುವ ಹಫೀಜ್ ಸಯೀದ್‌ನನ್ನು ಬಂಧಿಸುವಂತೆ ಪ್ರಧಾನಿ ಅವರ ಬಿರಿಯಾನಿ ಸ್ನೇಹಿತ ನವಾಜ್ ಷರೀಫ್ ಅವರಿಗೆ ಹೇಳಿ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮನಿಶ್ ತಿವಾರಿ ಟ್ವೀಟ್ ಮಾಡಿದ್ದಾರೆ.
ಷಾ ಪ್ರಶ್ನೆ?: ‘ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದ ಪ್ರೋತ್ಸಾಹಿಸುವ ಕೇಂದ್ರವನ್ನಾಗಿ ಪರಿವರ್ತಿಸುವ ಮೂಲಕ ರಾಷ್ಟ್ರೀಯ ರಾಜಧಾನಿಯಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಕ್ಕೆ ಕಳಂಕ ತರುವ ಯತ್ನ ನಡೆದಿದೆ. ಇದನ್ನು ನೋಡುತ್ತ ಕೇಂದ್ರ ಸರ್ಕಾರವು ಸುಮ್ಮನೇ ಕುಳಿತಿದ್ದರೇ ಅದು ರಾಷ್ಟ್ರೀಯ ಹಿತಾಸಕ್ತಿ ಎನಿಸುತ್ತಿತ್ತೇ? ಎಂಬುದನ್ನು ರಾಹುಲ್ ಗಾಂಧಿ ಅವರಲ್ಲಿ ಕೇಳುತ್ತೇನೆ’ ಎಂದು ಷಾ ಕಿಡಿ ಕಾರಿದ್ದಾರೆ.
ಅಲ್ಲದೇ, ‘ಈ ರಾಷ್ಟ್ರ ವಿರೋಧಿಗಳನ್ನು ಬೆಂಬಲಿಸಿ ಪ್ರತಿಭಟಿಸುವ ಮೂಲಕ ನೀವು ದೇಶದ್ರೋಹಿಗಳನ್ನು ಪ್ರೋತ್ಸಾಹಿಸುತ್ತಿಲ್ಲವೇ?’ ಎಂದು ಅವರು ತಮ್ಮ ಬ್ಲಾಗ್ ಬರಹದಲ್ಲಿ ಪ್ರಶ್ನಿಸಿದ್ದಾರೆ.
‘ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರತ್ಯೇಕತಾವಾದಿಗಳನ್ನು ಮುಕ್ತವಾಗಿ ತಿರುಗಾಡಲು ಬಿಡುವ ಮೂಲಕ ಭಾರತ ಮತ್ತೊಮ್ಮೆ ಇಬ್ಭಾಗವಾಗಬೇಕೆಂದು ಅವರು(ರಾಹುಲ್) ಬಯಸುತ್ತಾರೆಯೇ? ಅವರ ಹೃದಯದಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಜಾಗವಿಲ್ಲ ಎಂಬುದನ್ನು ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಅವರ ಪಕ್ಷದ ಇತರ ನಾಯಕರು ಜೆಎನ್‌ಯು ವಿ.ವಿಯಲ್ಲಿ ನೀಡಿರುವ ಹೇಳಿಕೆಗಳು ಮತ್ತೊಮ್ಮೆ ಸಾಬೀತು ಪಡಿಸಿವೆ’ ಎಂದು ಜರೆದಿದ್ದಾರೆ.