ರಾಷ್ಟ್ರೀಯ

ಸಾಲ ವಸೂಲಿಗೆ ‘ಬ್ಯಾಡ್‌ ಬ್ಯಾಂಕ್‌’ ಸ್ಥಾಪನೆ: ಕೇಂದ್ರ ಚಿಂತನೆ

Pinterest LinkedIn Tumblr

bankwebನವದೆಹಲಿ (ಪಿಟಿಐ): ₹500 ಕೋಟಿಗೂ ಹೆಚ್ಚಿನ ಮೊತ್ತದ ಸಾಲ ಮರು ಪಾವತಿ ಮಾಡದ ಉದ್ದಿಮೆ ಸಂಸ್ಥೆಗಳ ಪಟ್ಟಿಯನ್ನು ತನಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್‌, ರಿಸರ್ವ್‌ ಬ್ಯಾಂಕ್‌ಗೆ ಸೂಚಿಸಿದ ಬೆನ್ನಲ್ಲೇ, ಸಾಲ ವಸೂಲಿ ಮಾಡಲೆಂದೇ ಪ್ರತ್ಯೇಕ ಬ್ಯಾಂಕ್‌ ಅಥವಾ ಕಂಪೆನಿಯನ್ನು ಸ್ಥಾಪಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಭಾರಿ ಪ್ರಮಾಣದಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ, ಬ್ಯಾಡ್ ಲೋನ್‌ ವಸೂಲಿ ಮಾಡಲು ‘ಬ್ಯಾಡ್‌ ಬ್ಯಾಂಕ್‌’ ಸ್ಥಾಪನೆಯ ಪ್ರಸ್ತಾವವನ್ನು ಸರ್ಕಾರ ಗಂಭೀರವಾಗಿಯೇ ಪರಿಶೀಲಿಸುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಪಿಎಸ್‌ಯು ಬ್ಯಾಂಕ್‌ಗಳ ಸಾಲ ವಸೂಲಿಗಾಗಿ ಕಂಪೆನಿ ಸ್ಥಾಪಿಸುವುದು ಒಳ್ಳೆಯದೇ ಅಥವಾ ಬ್ಯಾಂಕ್‌ ಆರಂಭಿಸುವುದು ಉಚಿತವೇ ಎನ್ನುವುದರ ಕುರಿತು ಚರ್ಚೆ ನಡೆಸಿದ್ದೇವೆ. ಆದರೆ, ಇನ್ನೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ‘ಬ್ಯಾಡ್‌ ಬ್ಯಾಂಕ್‌’ ಸ್ಥಾಪಿಸುವುದು ಉಚಿತ ಎನಿಸುತ್ತದೆ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಉಷಾ ಅನಂತಸುಬ್ರಮಣಿಯನ್‌ ಹೇಳಿದ್ದಾರೆ. ಸಾಲ ವಸೂಲಿ ಜವಾಬ್ದಾರಿಯನ್ನು ಇನ್ನೊಂದು ಬ್ಯಾಂಕಿಗೆ ವಹಿಸುವುದರಿಂದ ನಮ್ಮ ಮೇಲಿನ ಹೊರೆ ಗಣನೀಯವಾಗಿ ತಗ್ಗುತ್ತದೆ ಎಂದು ಕೆಲವು ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಬ್ಯಾಡ್‌ ಬ್ಯಾಂಕ್‌ ಸ್ಥಾಪನೆ ಅಗತ್ಯ ಇಲ್ಲ ಎಂದು ‘ಆರ್‌ಬಿಐ’ ಗವರ್ನರ್‌ ರಘುರಾಂ ರಾಜನ್‌ ಇತ್ತೀಚೆಗೆ ಹೇಳಿದ್ದನ್ನೂ ಇಲ್ಲಿ ಸ್ಮರಿಸಬಹುದು.

Write A Comment