ಮುಂಬೈ: ಮಾದಕ ವಸ್ತುಗಳ ವ್ಯಾಪಾರ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ವಸ್ತುಗಳ ಪೂರೈಕೆ ಮಾಡುತ್ತಿದ್ದ ಮತ್ತು ಪಿತೂರಿ ನಡೆಸುತ್ತಿದ್ದ ಆರೋಪದ ಮೇಲೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೋದರನ ಪುತ್ರ ಸೊಹೈಲ್ ಕಸ್ಕರ್ ನನ್ನು ಅಮೆರಿಕದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈತ ಕೊಲಂಬಿಯಾದ ಫಾರ್ಕ್ ಎಂಬ ಭಯೋತ್ಪಾದಕ ಸಂಘಟನೆಗೆ ಕ್ಷಿಪಣಿ ಉಡ್ಡಯನ ಉಪಕರಣಗಳನ್ನು ಮತ್ತು ಇತರ ವಸ್ತುಗಳನ್ನು ಒದಗಿಸಿಕೊಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೊಹೈಲ್ ಮತ್ತು ಪಾಕಿಸ್ತಾನದ ಇಬ್ಬರನ್ನು ಅಮೆರಿಕದ ಮಾದಕವಸ್ತು ಜಾರಿ ಆಡಳಿತ ಕಳೆದ ವರ್ಷ ಡಿಸೆಂಬರ್ ನಲ್ಲಿ ವಶಕ್ಕೆ ತೆಗೆದುಕೊಂಡಿತ್ತು.ಸೊಹೈಲ್ ದಾವೂದ್ ಇಬ್ರಾಹಿಂನ ಮೃತ ಕಿರಿ ಸೋದರ ನೂರಾನ ಹಿರಿಯ ಪುತ್ರ. ಸೊಹೈಲ್ ನ ವಿರುದ್ಧದ ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆ ಅಥವಾ ಕನಿಷ್ಟ 25 ವರ್ಷ ಜೈಲುಶಿಕ್ಷೆ ಅನುಭವಿಸುತ್ತಾನೆ.
ಫಾರ್ಕ್ ಭಯೋತ್ಪಾದಕ ಸಂಘಟನೆಗೆ ಕ್ಷಿಪಣಿ ವಸ್ತುಗಳನ್ನು ಪೂರೈಸುತ್ತಿದ್ದುದಕ್ಕೆ ಮತ್ತು ಮಾದಕ ವಸ್ತುಗಳನ್ನು ಅಮೆರಿಕಕ್ಕೆ ಪಾಕಿಸ್ತಾನದಿಂದ ಅಕ್ರಮವಾಗಿ ತರಿಸುತ್ತಿದ್ದ ಆರೋಪದ ಮೇಲೆ ಮ್ಯಾನ್ ಹಟ್ಟನ್ ಫೆಡರಲ್ ಕೋರ್ಟ್ ಸೊಹೈಲ್ ನನ್ನು ಆಪಾದಿತ ಎಂದು ಹೇಳಿದೆ. ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಆತನ ವಿರುದ್ಧದ ಕೇಸು, ಆರೋಪಗಳನ್ನು ನೋಡಿಕೊಳ್ಳಲು ದೊಡ್ಡ ವಕೀಲರೊಬ್ಬರನ್ನು ದಾವೂದ್ ನೇಮಿಸಿದ್ದಾನೆ.
ತನ್ನ ಸೋದರ ಪುತ್ರನ ಬಂಧನ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ತೀವ್ರ ಮುಜುಗರವನ್ನುಂಟುಮಾಡುವ ಸಂಗತಿಯಾಗಿದೆ ಮತ್ತು ಹಿನ್ನಡೆಯಾಗಿದೆ ಎಂದು ಆತನ ಹಳೆ ಸಹಚರನೊಬ್ಬ ತಿಳಿಸಿದ್ದಾನೆ. ಸೊಹೈಲ್ ಮತ್ತು ಆತನ ಸಹಚರರಾದ ಪಾಕಿಸ್ತಾನದ ಪಿರ್ಸಾದ ಹಮೀದ್ ಕಿಸ್ತಿ ಮತ್ತು ಅಬ್ದುಲ್ ವಹಾಬ್ ಕಿಸ್ತಿಯನ್ನು 2014ರಲ್ಲಿ ಸ್ಪೈನ್ ನಲ್ಲಿ ಅಮೆರಿಕ ಸರ್ಕಾರದ ಮನವಿ ಮೇರೆಗೆ ಬಂಧಿಸಲಾಗಿತ್ತು.ಬಂಧನದ ನಂತರ ಗಡೀಪಾರುಗೊಂಡಿದ್ದ ಸೊಹೈಲ್ ಮತ್ತು ಸಹಚರರನ್ನು ನ್ಯೂಯಾರ್ಕ್ ನ ಮಾದಕವಸ್ತು ಜಾರಿ ನಿರ್ದೇಶನಾಲಯ ವಶಕ್ಕೆ ತೆಗೆದುಕೊಂಡಿತು.