ಚಂಡೀಘಡ: ಶಿಕ್ಷಣ ಮತ್ತು ಸರ್ಕಾರಿ ನೌಕರಿಯಲ್ಲಿ ಒಬಿಸಿ ವರ್ಗದಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಜಾಟ್ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆಗೆ ಮಣಿದಿರುವ ಹರ್ಯಾಣ ಸರ್ಕಾರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ನೀಡಿದೆ.
ಸರ್ಕಾರ ಪ್ರತಿಭಟನಾಕಾರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದೆ. ಹೀಗಾಗಿ ತಕ್ಷಣವೇ ಪ್ರತಿಭಟನೆ ಕೈ ಬಿಡಬೇಕು ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟಾರ್ ಹೇಳಿಕೆ ನೀಡಿದ್ದಾರೆ.
ಸರ್ವ ಪಕ್ಷಗಳ ಸಭೆ ಕರೆದು ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಸಮಾಲೋಚನೆ ನಡೆಸುವುದಾಗಿ ಕಟ್ಟಾರ್ ಹೇಳಿದ್ದಾರೆ, ಆದರೆ ಕಟ್ಟಾರ್ ಹೇಳಿಕೆಗೆ ಒಪ್ಪದ ಪ್ರತಿಭಟನಾಕಾರರು ಸಿಎಂ ತಮ್ಮ ಹೇಳಿಕೆಯನ್ನು ಲಿಖಿತ ರೂಪದಲ್ಲಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ಜಾಟ್ ಸಮುದಾಯದ ಮೀಸಲಾತಿಗೆ ಒತ್ತಾಯಿಸಿ ಹರ್ಯಾಣದ ಹಲವು ಕಡೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಮನೋಹರ್ ಲಾಲ್ ಕಟ್ಟಾರ್ ಸಾರ್ವಜನಿಕ ಆಸ್ತಿ ನಷ್ಟ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದರು.