ಪಂಪೋರ್: ಜಮ್ಮು ಮತ್ತು ಕಾಶ್ಮೀರದ ಪಂಪೋರ್ ಪಟ್ಟಣದಲ್ಲಿ ಕಟ್ಟಡವೊಂದರ ಒಳಗೆ ಅವಿತುಕೊಂಡಿದ್ದ ಭಯೋತ್ಪಾದಕರನ್ನು ಬಗ್ಗು ಬಡಿಯಲು ಭಾರತೀಯ ಯೋಧರು ಮೂರು ದಿನಗಳ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದಾಗ, ನೆರೆ ಹೊರೆಯ ಮಸೀದಿಗಳಲ್ಲಿ ಭಯೋತ್ಪಾದಕರನ್ನು ‘ಮುಜಾಹಿದ್’ಗಳು (ಪವಿತ್ರ ಸಮರ ವೀರರು) ಎಂಬುದಾಗಿ ಧ್ವನಿವರ್ಧಕಗಳ ಮೂಲಕ ಹೊಗಳುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಫ್ರೆಸ್ಟಾಬಲ್, ಡ್ರಾಂಗ್ಬಲ್, ಕಡ್ಲಾಬಲ್ ಮತ್ತು ಸೆಂಪೋರಾ ಪ್ರದೇಶಗಳ ಮಸೀದಿಗಳಲ್ಲಿ ಭಯೋತ್ಪಾದಕರನ್ನು ಹೊಗಳುತ್ತಾ ‘ಜಾಗೋ ಜಾಗೋ ಸುಬಹ್ ಹುಯಿ’ (ಏಳಿ, ಏಳಿ ಬೆಳಗಾಗಿದೆ) ‘ಜಿವೇ, ಜಿವೇ ಪಾಕಿಸ್ತಾನ್! ಮತ್ತು ‘ಹಮ್ ಕ್ಯಾ ಚಾಹ್ತೆ- ಆಜಾದಿ’ ಇತ್ಯಾದಿ ಧ್ವನಿ ಮುದ್ರಿತ ಘೋಷಣೆಗಳು ಮಸೀದಿಗಳ ಧ್ವನಿ ವರ್ಧಕಗಳ ಮೂಲಕ ಇಡೀ ದಿನ ಮೊಳಗುತ್ತಿದ್ದವು ಎಂದು ವರದಿಗಳು ತಿಳಿಸಿವೆ.
ಯೋಧರು ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಘರ್ಷಣೆ ನಡೆಯುತ್ತಿದ್ದ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ (ಇಡಿಐ) ಕಟ್ಟಡ ನಿವೇಶನ ಸಮೀಪದ ತೊರೆಯೊಂದರ ಬಳಿ ಜಮಾಯಿಸಿದ್ದ ನೂರಾರು ಯುವಕರು ತೊರೆದಾಟಿ ಕಟ್ಟಡದ ಬಳಿಗೆ ಬರಲು ಹಾಗೂ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸದಂತೆ ತಡೆಯಲೂ ಯತ್ನಿಸಿದ್ದರು ಎಂದೂ ವರದಿಗಳು ಹೇಳಿವೆ. ಸೆಂಪೋರಾ ಶ್ರೀನಗರದಿಂದ ಕೇವಲ 15 ಕಿ.ಮೀ. ದೂರದಲ್ಲಿದೆ.
ಪೊಲೀಸರು ಮತ್ತು ಅರೆ ಸೇನಾ ಪಡೆಗಳು ಆಶ್ರುವಾಯ ಷೆಲ್ ಸಿಡಿಸುವ ಮೂಲಕ ಗುಂಪನ್ನು ತೊರೆ ದಾಟದಂತೆ ತಡೆದವು. ಇದಕ್ಕೆ ಪ್ರತಿಯಾಗಿ ಉದ್ರಿಕ್ತ ಯುವಕರು ಸೆಂಪೋರಾದಲ್ಲಿ ಅರೆ ಸೇನಾ ಪಡೆಗಳತ್ತ ಕಲ್ಲುಗಳನ್ನು ತೂರಿದರು ಎಂದು ಮೂಲಗಳು ಹೇಳಿವೆ. ಧ್ವನಿ ವರ್ಧಕಗಳ ಮೂಲಕ ಭಯೋತ್ಪಾದಕರಿಗೆ ಬೆಂಬಲವಾಗಿ ಘೋಷಣೆ ಮೊಳಗಿಸುತ್ತಿದ್ದುದು ಕಂಡು ಪೊಲೀಸರಿಗೆ ಅಚ್ಚರಿಯಾಯಿತು. ಪಾಕಿಸ್ತಾನದಿಂದ ಸರಬರಾಜು ಆಗಿರ ಬಹುದು ಎಂದು ನಂಬಲಾಗಿರುವ ಈ ಧ್ವನಿವರ್ಧಕಗಳ ಪ್ರಸಾರವನ್ನು ನಿಲ್ಲಿಸುವ ಸಲುವಾಗಿ ಮಸೀದಿಗಳ ಒಳಹೋಗಲು ಪೊಲೀಸರಿಗೆ ಸಾಧ್ಯವಾಗಲಿಲ್ಲ ಎಂದು ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ.