ನವದೆಹಲಿ (ಪಿಟಿಐ): ದೇಶದ್ರೋಹ ಪ್ರಕರಣದ ಇತ್ತೀಚಿನ ಬೆಳವಣಿಗಳಿಂದಾಗಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕನ್ಹಯಾ ಕುಮಾರ್ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ದೆಹಲಿ ಪೊಲೀಸರು ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ನ್ಯಾಯಮೂರ್ತಿ ಪ್ರತಿಭಾ ರಾಣಿ ಅವರು ಕನ್ಹಯ್ಯಾ ಜಾಮೀನು ಅರ್ಜಿ ವಿಚಾರಣೆ ಆರಂಭಿಸುತ್ತಿದ್ದಂತೆಯೇ, ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಷಯವನ್ನು ನ್ಯಾಯಾಲಯಕ್ಕೆ ತಿಳಿಸಿದರು.
‘ಪ್ರಕರಣ ಸಂಬಂಧ ಮಂಗಳವಾರದ ಬೆಳವಣಿಗೆಯಲ್ಲಿ ಇಬ್ಬರು ಆರೋಪಿಗಳು ಶರಣಾಗಿದ್ದು, ಸುರಕ್ಷಿತವಾಗಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು ವಶಕ್ಕೆ ನೀಡುವಂತೆ ಇನ್ನಷ್ಟೇ ಕೋರಬೇಕಿದೆ. ಹೊಸ ಬೆಳವಣಿಗೆಯ ಹಿನ್ನೆಲೆಯಲ್ಲಿ ಆರೋಪಿಯನ್ನು 15 ದಿನಗಳ ಪೊಲೀಸ್ ವಶಕ್ಕೆ ಕೋರುವ ಅಧಿಕಾರ ಪೊಲೀಸರಿಗಿದೆ. ಕನ್ಹಯ್ಯಾನನ್ನು ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಎದುರು ವಿಚಾರಣೆಗೆ ಒಳಪಡಿಸುವ ನಿಟ್ಟಿನಲ್ಲಿ, ಆತನನನ್ನು ಮತ್ತೆ ವಶಕ್ಕೆ ಕೇಳುತ್ತೇವೆ’ ಎಂದು ನ್ಯಾಯಾಲಯಕ್ಕೆ ಮೆಹ್ತಾ ತಿಳಿಸಿದರು.
‘ನಮ್ಮ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ’ ಎಂದು ವಾದಿಸಿದ ಮೆಹ್ತಾ, ‘ಜಾಮೀನು ಅರ್ಜಿ ವಿಚಾರಣೆ ಮುಂದೂಡಿ’ ಎಂದು ಮನವಿ ಮಾಡಿದರು.
ಬಳಿಕ ನ್ಯಾಯಾಲಯ ಕನ್ಯಯಾ ಜಾಮೀನು ಅರ್ಜಿಯನ್ನು ಫೆಬ್ರುವರಿ 29ಕ್ಕೆ ನಿಗದಿಪಡಿಸಿತು.
ಈ ಮಧ್ಯೆ, ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿನ ಹಲ್ಲೆ ಘಟನೆಗಳ ಕುರಿತು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಆ ಬಳಿಕ ನ್ಯಾಯಾಲಯ, ‘ಈ ಬಾರಿ ಯಾರಿಗೂ ಪುಟ್ಟ ಗಾಯವೂ ಆಗದಂತೆ ನಾವು ನೋಡಿಕೊಳ್ಳಬೇಕು. ಹಿಂದಿನ ಘಟನೆಗಳು ಮರುಕಳಿಸದಂತೆ ದೆಹಲಿ ಕೋರ್ಟ್ ರಜಿಸ್ಟ್ರಾರ್ ಹಾಗೂ ದೆಹಲಿ ಪೊಲೀಸರು ಖಚಿತಿಪಡಿಸಬೇಕು’ ಎಂದಿತು.
ಸಿಬಲ್ ವಾದ: ‘ನ್ಯಾಯಾಲಯದ ಆದೇಶದಂತೆ ಪೊಲೀಸರು ಸಲ್ಲಿಸಿರುವ ಸ್ಥಿತಿಗತಿ ವರದಿಯಲ್ಲಿ ಕನ್ಹಯಾ ದೇಶ ವಿರೋಧಿ ಘೋಷಣೆ ಕೂಗಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆದ್ದರಿಂದ ಆತನಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ಕನ್ಹಯ್ಯಾ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದ್ದರು.