ಮೀರ್‌ಪುರ್: ಭಾರತ ತಂಡವು ಇಲ್ಲಿ ಯವರೆಗೆ ಸತತ ಗೆಲುವುಗಳಿಂದ ಆತ್ಮ ವಿಶ್ವಾಸದ ಹೊಳೆಯಲ್ಲಿ ಈಜಾಡುತ್ತಿದೆ. ಭಾನುವಾರ ಆತಿಥೇಯ ಬಾಂಗ್ಲಾದ ಸವಾಲನ್ನು ಮೆಟ್ಟಿ ನಿಂತು ಏಷ್ಯಾ ಕಪ್‌ಗೆ ಮುತ್ತಿಡುವ ಛಲದಲ್ಲಿದೆ.
ಆರು ವರ್ಷಗಳ ನಂತರ ಫೈನಲ್ ತಲುಪಿರುವ ಭಾರತವು ಆರನೇ ಬಾರಿ ಪ್ರಶಸ್ತಿ ಗೆಲ್ಲುವ ಛಲದಲ್ಲಿದೆ. 2010ರಲ್ಲಿ ಗೆದ್ದ ನಂತರ ಭಾರತ ಫೈನಲ್ ತಲುಪಿರಲಿಲ್ಲ. (ಆಗ ಏಷ್ಯಾ ಚಾಂಪಿ ಯನ್‌ಷಿಪ್ ಏಕದಿನ ಮಾದರಿಯ ದ್ದಾಗಿತ್ತು. ಟಿ20 ನಡೆಯುತ್ತಿರುವುದು ಇದೇ ಮೊದಲು). ಭಾರತ ತಂಡವು ಒಟ್ಟು ಐದು ಬಾರಿ ಪ್ರಶಸ್ತಿ ಗೆದ್ದಿದೆ.
ಇಲ್ಲಿಯ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಸೇರಲಿರುವ ಸ್ಥಳೀಯ ಅಭಿಮಾನಿಗಳಿಗೆ ‘ಕಾಣಿಕೆ’ ನೀಡುವ ಇರಾದೆಯಲ್ಲಿ ಮಷ್ರಫೆ ಮೊರ್ತಾಜ ಬಳ ಗವೂ ಇದೆ. ಕಳೆದ ಒಂದು ವರ್ಷದಲ್ಲಿ ಬಲಿಷ್ಠ ಕ್ರಿಕೆಟ್ ತಂಡಗಳಿಗೆ ಕಠಿಣ ಪೈಪೋಟಿ ಒಡ್ಡಿರುವ ಬಾಂಗ್ಲಾ ತಂಡವು ಈ ಅವಕಾಶವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಆದ್ದರಿಂದ ದೋನಿ ಬಳಗಕ್ಕೆ ಗೆಲುವು ಸುಲಭವಾಗಿ ದಕ್ಕುವ ಸಾಧ್ಯತೆ ಗಳು ಕಡಿಮೆ. ಆದ್ದರಿಂದ ಯಾವುದೇ ಹೊಸ ಪ್ರಯೋಗಕ್ಕೆ ಕೈಹಾಕುವ ಸಾಹಸವನ್ನು ದೋನಿ ತೋರುವುದು ಸಂಶಯ.
ಲೀಗ್ ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡವು ಭಾರತದ ಎದುರು ಸೋತಿತ್ತು. ನಂತರ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ಎದುರು ಭಾರತ ಭರ್ಜರಿ ಜಯ ಸಾಧಿಸಿತ್ತು. ಬಾಂಗ್ಲಾ ಕೂಡ ಶ್ರೀಲಂಕಾ, ಪಾಕಿಸ್ತಾನ ಮತ್ತು ಯುಎಇ ತಂಡಗಳ ಎದುರು ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು.
ಕಳೆದ ಎಲ್ಲ ಪಂದ್ಯಗಳಲ್ಲಿಯೂ ಭಾರತದ ಬೌಲರ್‌ಗಳು ತಮ್ಮ ಕೈಚಳಕ ಮೆರೆದಿದ್ದಾರೆ. ಅನುಭವಿ ಎಡಗೈ ವೇಗಿ ಆಶಿಶ್ ನೆಹ್ರಾ, ನವಪ್ರತಿಭೆ ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಮಿಂಚಿ ದ್ದಾರೆ. ಆತಿಥೇಯ ತಂಡದ ಸೌಮ್ಯ ಸರ್ಕಾರ್, ಮಷ್ರಫೆ ಮತ್ತು ಶಬ್ಬೀರ್ ರೆಹ ಮಾನ್, ಶಕೀಬ್ ಅಲ್ ಹಸನ್ ಅವರು ಭಾರತದ ಬೌಲರ್‌ಗಳನ್ನು ದಿಟ್ಟತನ ದಿಂದ ಎದುರಿಸಿದರೆ ಪಂದ್ಯ ರೋಚಕ ಘಟ್ಟ ಮುಟ್ಟುವುದರಲ್ಲಿ ಅನುಮಾನ ವಿಲ್ಲ.
2012ರ ಟೂರ್ನಿಯಲ್ಲಿ ಬಾಂಗ್ಲಾ ಫೈನಲ್ ತಲುಪಿತ್ತು. ಆದರೆ, ಪಾಕಿಸ್ತಾ ನದ ಎದುರು ಸೋಲನುಭವಿಸಿತ್ತು. ಆ ಪಂದ್ಯದಲ್ಲಿ ಮಷ್ರಫೆ, ಶಕೀಬ್ ಅಲ್ ಹಸನ್, ಶಬ್ಬೀರ್ ರೆಹಮಾನ್ ಕೂಡ ತಂಡದಲ್ಲಿದ್ದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಬೌಲರ್ ಅಲ್ ಅಮಿನ್ ಹುಸೇನ್ ಅವರ ಮೇಲೆ ಹೆಚ್ಚು ಜವಾ ಬ್ದಾರಿ ಇದೆ. ತಸ್ಕಿನ್ ಅಹಮದ್, ಅರಾ ಫತ್ ಸನ್ನಿ ಅವರೊಂದಿಗೆ ಪರಿಣಾಮ ಕಾರಿ ದಾಳಿ ನಡೆಸಬೇಕಾಗಿದೆ. ತಂಡದ ವೇಗಿ ಮುಸ್ತಫಿಜುರ್ ರೆಹಮಾನ್ ಗಾಯ ಗೊಂಡಿದ್ದಾರೆ. ಅವರು ಈ ಪಂದ್ಯದಲ್ಲಿ ಆಡುವ ಸಾಧ್ಯತೆ ತೀರಾ ಕಡಿಮೆ.
ಆದರೆ, ಉತ್ತಮ ಫಾರ್ಮ್‌ನಲ್ಲಿರುವ ಭಾರತದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ದೋನಿ, ಸುರೇಶ್ ರೈನಾ ಅವ ರನ್ನು ಕಟ್ಟಿಹಾಕಲು ಬಾಂಗ್ಲಾ ಬೌಲರ್ ಗಳು ತಮ್ಮ ಸಾಮರ್ಥ್ಯ ಮೀರಿ ಪ್ರಯತ್ನಿಸಬೇಕಿದೆ. ಪಾಕಿಸ್ತಾನದ ಮೊಹಮ್ಮದ್ ಆಮೀರ್, ಮೊಹಮ್ಮದ ಶಮಿ ಅವರನ್ನು ದಿಟ್ಟತನದಿಂದ ಎದುರಿಸಿದ್ದ ಕೊಹ್ಲಿ ಮತ್ತು ಯುವರಾಜ್ ಸಿಂಗ್ ತಂಡದ ಗೆಲುವಿಗೆ ಕಾರಣರಾಗಿದ್ದರು. ಗಾಯ ದಿಂದ ಚೇತರಿಸಿಕೊಂಡಿರುವ ಶಿಖರ್ ಧವನ್ ಕೂಡ ಯುಎಇ ವಿರುದ್ಧ ರೋಹಿತ್ ಶರ್ಮಾ ಜೊತೆಗೂಡಿ ಉತ್ತಮ ಆರಂಭ ನೀಡಿದ್ದರು.
ಸ್ಪಿನ್ ವಿಭಾಗದಲ್ಲಿ ಆರ್. ಅಶ್ವಿನ್, ರವೀಂದ್ರ ಜಡೇಜ ಅವರಿಗೆ ಯುವ ರಾಜ್ ಸಿಂಗ್ ಕೂಡ ಉತ್ತಮ ಜೊತೆ ನೀಡುವ ಆಟಗಾರ. ತಮ್ಮ ಬೌಲಿಂಗ್ ಮೂಲಕ ಪಂದ್ಯಕ್ಕೆ ಮಹತ್ವದ ತಿರುವು ನೀಡುವ ಶಕ್ತಿ ಯುವರಾಜ್ ಸಿಂಗ್ ಅವರಿಗೆ ಇದೆ.
ಏನೇ ಅಳೆದು, ಸುರಿದು ನೋಡಿ ದರೂ ಭಾರತ ತಂಡವು ಬಾಂಗ್ಲಾಗಿಂತ ಬಲಿಷ್ಠ. ಭಾರತವು ಆಡಿರುವ ಕಳೆದ ಹತ್ತು ಟಿ20 ಪಂದ್ಯಗಳಲ್ಲಿ ಒಂಬತ್ತರಲ್ಲಿ ಜಯ ಸಾಧಿಸಿದೆ.
ಮುಂದಿನ ವಾರ ವಿಶ್ವ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯು ಭಾರತದ ಆತಿಥ್ಯದಲ್ಲಿಯೇ ನಡೆಯಲಿದೆ. ಏಷ್ಯಾ ಕಪ್ ಜಯದೊಂದಿಗೆ ಮರಳಿ ಬಂದು ವಿಶ್ವ ಅಭಿಯಾನ ಆರಂಭಿಸಲು ದೋನಿ ಬಳಗವು ಕನಸು ಕಾಣುತ್ತಿದೆ.
ಶಕೀಬ್‌ಗೆ ಗಾಯ
ಬಾಂಗ್ಲಾದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಸ್ನಾಯುಸೆಳೆತದಿಂದ ಬಳಲುತ್ತಿದ್ದಾರೆ. ಅವರು ಫೈನಲ್‌ನಲ್ಲಿ ಆಡುವುದು ಇನ್ನೂ ಖಚಿತವಾಗಿಲ್ಲ.
ಶುಕ್ರವಾರದ ಪಂದ್ಯದಲ್ಲಿ ಅವರು ತೊಡೆಯ ಸ್ನಾಯು ಸೆಳೆತ ಅನುಭವಿಸಿದ್ದರು. ಐಸ್‌ಪ್ಯಾಕ್ ಪ್ರಥಮ ಚಿಕಿತ್ಡೆ ಪಡೆದಿದ್ದರೂ ಕುಂಟುತ್ತಿದ್ದರು. ಶನಿವಾರ ಅವರು ಅಭ್ಯಾಸ ಮಾಡಲಿಲ್ಲ. ಒಂದು ವೇಳೆ ಅವರು ಆಡದಿದ್ದರೆ ಬಾಂಗ್ಲಾಗೆ ಹೆಚ್ಚು ಒತ್ತಡ ಬೀಳಲಿದೆ.
ಟೂರ್ನಿಯ ಪ್ರತಿಯೊಂದು ಪಂದ್ಯವನ್ನೂ ನಾವು ನಾಕೌಟ್ ಎಂದೆ ಪರಿಗಣಿಸಿದ್ದೇವೆ. ಆದ್ದರಿಂದ ಫೈನಲ್‌ನಲ್ಲಿ ನಮಗೆ ಒತ್ತಡವಿಲ್ಲ. ಉತ್ತಮ ಪ್ರದರ್ಶನ ನೀಡುತ್ತೇವೆ.
ರವಿಶಾಸ್ತ್ರಿ
ಭಾರತ ತಂಡದ ನಿರ್ದೇಶಕ
ಈ ಪಂದ್ಯದಲ್ಲಿ ಭಾರತವೇ ನೆಚ್ಚಿನ ತಂಡ ಎಂದು ಬಿಂಬಿಸಲಾಗಿದೆ. ಅದೇ ತಂಡ ಫೆವರಿಟ್ ಆಗಿರಲಿ. ನಾವು ನಮ್ಮ ಆಟವನ್ನು ಆಡುತ್ತೇವೆ.
ಮಷ್ರಫೆ ಮೊರ್ತಾಜಾ
ಬಾಂಗ್ಲಾ ತಂಡದ ನಾಯಕ
ತಂಡಗಳು ಇಂತಿವೆ
ಭಾರತ
ಮಹೇಂದ್ರಸಿಂಗ್ ದೋನಿ (ನಾಯಕ–ವಿಕೆಟ್‌ಕೀಪರ್), ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್. ಅಶ್ವಿನ್, ಆಶಿಶ್ ನೆಹ್ರಾ, ಜಸ್‌ಪ್ರೀತ್ ಬೂಮ್ರಾ, ಅಜಿಂಕ್ಯ ರಹಾನೆ, ಹರಭಜನ್ ಸಿಂಗ್, ಪವನ್ ನೇಗಿ, ಭುವನೇಶ್ವರ್ ಕುಮಾರ್.
ಬಾಂಗ್ಲಾದೇಶ
ಮಷ್ರಫೆ ಮೊರ್ತಾಜಾ (ನಾಯಕ), ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಬ್ಬೀರ್ ರಹಮಾನ್, ಮುಷ್ಫಿಕರ್ ರಹೀಂ, ಶಕೀಬ್ ಅಲ್ ಹಸನ್, ಮೆಹಮೂದುಲ್ಲಾ , ಮೊಹಮ್ಮದ್ ಮಿಥುನ್, ಅರಾಫತ್ ಸನ್ನಿ, ತಸ್ಕೀನ್ ಅಹಮದ್, ಅಲ್ ಅಮಿನ್ ಹುಸೇನ್, ಅಬು ಹೈದರ್, ನುರುಲ್ ಹಸನ್, ಇಮ್ರುಲ್ ಕೈಸ್,
ಪಂದ್ಯದ ಆರಂಭ: ಸಂಜೆ 7
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ .