ನವದೆಹಲಿ: ಆಗ ತಾನೆ ಅಸ್ತಿತ್ವಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷ ಕಳೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.
ಆಮ್ ಆದ್ಮಿ ಪಕ್ಷ ಸ್ಥಾಪಿಸಿ ಕಡಿಮೆ ಅವಧಿಯಲ್ಲಿ ಜನರ ಮನಸ್ಸನ್ನು ಸೆಳೆದು ದೆಹಲಿಯಲ್ಲಿ ಆಪ್ ಅರಳುವಂತೆ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸ್ಫೂರ್ತಿಯಿಂದಾಗಿ ಪಾಕಿಸ್ತಾನದಲ್ಲಿ ಆಪ್ ಹೆಸರಲ್ಲಿ ಆರು ರಾಜಕೀಯ ಪಕ್ಷಗಳು ಮೊಳಕೆಯೊಡೆದು ಅಸ್ತಿತ್ವಕ್ಕೆ ಬಂದಿವೆ.
ಗುಜ್ರಾನ್ವಾಲಾದ ಮಾನವ ಹಕ್ಕುಗಳ ಕಾರ್ಯಕರ್ತ ಅರ್ಸ್ಲಾನ್ ಉಲ್ ಮುಲ್ಕ್ ಆಮ್ ಆದ್ಮಿ ಪಕ್ಷ ಮುನ್ನಡೆಸುತ್ತಿದ್ದಾರೆ. ಇನ್ನು ಆಮ್ ಆದ್ಮಿ ಜಸ್ಟೀಸ್ ಪಾರ್ಟಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ವಕೀಲರಾಗಿರುವ ಮಿಯಾನ್ ಗುಲಾಂ ರಸೂಲ್ ಸ್ಥಾಪಿಸಿದ್ದಾರೆ. ಅದೇ ರೀತಿ ಆಮ್ ಇನ್ಸಾನ್ ಮೂಮೆಂಟ್ ಪಕ್ಷವನ್ನು ರಾಣಾ ಮೋಹಿನ್ ಅಖ್ತರ್ ಹಾಗೂ ಆಮ್ ಲೋಗ್ ಪಾರ್ಟಿಯನ್ನು ಮುಹಮ್ಮುದ್ ನಸೀಮ್ ಸಿದ್ದಿಕ್ ಮುನ್ನಡೆಸುತ್ತಿದ್ದಾರೆ.
ಪಾಕಿಸ್ತಾನ ಚುನಾವಣಾ ಆಯೋಗ ಪ್ರಕಾರ ಪಕ್ಷಗಳ ನೊಂದಣಿ ಪಟ್ಟಿ ಇಂತಿದೆ. ಇನ್ನು ಇಸ್ಲಾಮಾಬಾದ್ ನಲ್ಲಿ ಆಮ್ ಆದ್ಮಿ ಪಾರ್ಟಿ ಆಪ್ ಪಾಕಿಸ್ತಾನ ಪಕ್ಷ ನೋಂದಾಯಿಸಿಕೊಂಡಿದ್ದು, ಇದನ್ನು ವಕೀಲ ಹಾಗೂ ಮಾನವ ಹಕ್ಕುಗಳ ಪ್ರಚಾರಕ ಅದ್ನನ್ ಹೈದರ್ ರಾನ್ಧಾವಾ ಮುನ್ನಡೆಸುತ್ತಿದ್ದಾರೆ.
ಮುಂದಿನ ವರ್ಷದ ಕರಾಚಿ ಸಾಹಿತ್ಯ ಉತ್ಸವಕ್ಕೆ ಆಪ್ ಸಂಸ್ಥಾಪಕ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸುವ ಸಾಧ್ಯತೆ ಇದೆ. ಆಮ್ ಆದ್ಮಿ ಪಕ್ಷದ ಗುರಿಯಂತೆ ಆಮ್ ಲೋಗ್ ಪಾರ್ಟಿ ಪಾಕಿಸ್ತಾನ ಸ್ವರಾಜ್ಯ ದೃಷ್ಠಿಕೋನವನ್ನು ಹೊಂದಿದೆ. ಇನ್ನು ಭಾರತದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಅಣ್ಣಾ ಹಜಾರೆಯವರು ಮುನ್ನಡಿಸಿದ್ದರು. ಇದೇ ರೀತಿ ಆಮ್ ಲೋಗ್ ಪಾರ್ಟಿ ಪಾಕಿಸ್ತಾನ ಸಹ ಇದೇ ಉದ್ದೇಶವನ್ನು ಹೊಂದಿದೆ.