ಅಂತರಾಷ್ಟ್ರೀಯ

ಪರಾರಿಯಾಗಿಲ್ಲ : ಮಾಧ್ಯಮಗಳ ಮೇಲೆ ಹರಿಹಾಯ್ದ ವಿಜಯ ಮಲ್ಯ

Pinterest LinkedIn Tumblr

mallya

ನವದೆಹಲಿ: ಒಂಬತ್ತು ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿ ಸಂಕಷ್ಟದಲ್ಲಿ ಸಿಲುಕಿ ಹಾಕಿಕೊಂಡಿರುವ ಮದ್ಯ ವ್ಯಾಪಾರಿ ವಿಜಯ್ ಮಲ್ಯ, ತಾವು ಸ್ವದೇಶದಿಂದ ಪರಾರಿಯಾಗಿಲ್ಲ ಹಾಗೂ ನೆಲದ ಕಾನೂನು ಪರಿಪಾಲನೆಗೆ ಬದ್ಧವಾಗಿರುವುದಾಗಿ ಇಂದು ಬೆಳಿಗ್ಗೆ ಹೇಳಿಕೊಂಡಿದ್ದಾರೆ.

`ನಾನೊಬ್ಬ ಅಂತಾರಾಷ್ಟ್ರೀಯ ಉದ್ಯಮಿ, ಪದೇಪದೇ ನಾನು ಭಾರತದಿಂದ ಹಾಗೂ ಭಾರತಕ್ಕೆ ಪ್ರಯಾಣ ಮಾಡುತ್ತಿರುತ್ತೇನೆ. ನಾನೇನು ಭಾರತದಿಂದ ಓಡಿಬಂದಿಲ್ಲ. ಇಲ್ಲವೇ ಪರಾರಿಯೂ ಆಗಿಲ್ಲ. ಗಲೀಜು’ ಎಂದವರು ಎಲ್ಲಿಂದಲೋ ಟ್ವೀಟ್ ಮಾಡಿದ್ದಾರೆ.

ಮಾಧ್ಯಮ ವಿಚಾರಣೆ ಬೇಕಿಲ್ಲ

`ಭಾರತದ ಸಂಸತ್ ಸದಸ್ಯನಾಗಿ ನನಗೆ ನೆಲದ ಕಾನೂನಿನ ಬಗ್ಗೆ ಸಂಪೂರ್ಣ ಗೌರವ ಭಾವನೆ ಇದ್ದು, ಅದರ ಪರಿಪಾಲನೆಗೆ ಬದ್ಧನಾಗಿದ್ದೇನೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಸದೃಢವಾಗಿದ್ದು, ಸರ್ವಮಾನ್ಯವಾಗಿದೆ. ಆದರೆ ಮಾಧ್ಯಮದಿಂದ ವಿಚಾರಣೆ ಬೇಕಾಗಿಲ್ಲ’ ಎಂದು ಈ ಸಂಬಂಧದ ಮಾಧ್ಯಮ ವರದಿಗಳಿಗೆ ತಿರುಗೇಟು ನೀಡಿದ್ದಾರೆ.

ಸತ್ಯ, ವಾಸ್ತವಾಂಶಗಳು ಬೂದಿ

ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ದೋಷಾರೋಪಣೆ ಮಾಡಿರುವ ಅವರು, ಒಮ್ಮೆ ಮಾಧ್ಯಮದ ಬೇಟೆ ಶುರುವಾಯಿತೆಂದರೆ ಮುಗಿಯಿತು. ಅದೊಂದು ರೀತಿಯಲ್ಲಿ ಕಾಳ್ಗಿಚ್ಚಿನಂತೆ ವ್ಯಾಪಿಸಿ ಅಲ್ಲಿ ಸತ್ಯ ಸಂಗತಿಗಳೆಲ್ಲ ಬೂದಿಯಾಗಿಬಿಡುತ್ತವೆ’ ಎಂದಿದ್ದಾರೆ.

ಟಿಆರ್‌ಪಿಗೆ ಉಪಕಾರ ಮರೆಯಬೇಡಿ

ಮಾಧ್ಯಮ ದೊರೆಗಳು ನನ್ನಿಂದ ವರ್ಷಾನುಗಟ್ಟಲೆಯಿಂದ ಪಡೆದಿರುವ ಉಪಕಾರಗಳನ್ನು ಮರೆಯದಿರಲಿ. ನನ್ನಿಂದ ಪಡೆದಿರುವ ಸಹಾಯ, ಅನುಕೂಲ, ವಸತಿ ವ್ಯವಸ್ಥೆ ಕುರಿತ ಮಾಹಿತಿ ಎಲ್ಲವೂ ದಾಖಲಾಗಿದೆ. ಆದ್ದರಿಂದ ಅದನ್ನೆಲ್ಲ ಮರೆಯಬೇಡಿ. ಈಗ ಟಿಆರ್‌ಪಿ ಗಳಿಸಿಕೊಳ್ಳಲು ಸುಳ್ಳು ಹರಡುವುದು ಬೇಡ ಎಂದು ಅವಲತ್ತುಕೊಂಡಿದ್ದಾರೆ.

ತಾವು ತಮ್ಮ ಆಸ್ತಿಪಾಸ್ತಿಗಳ ವಿವರಗಳನ್ನು ಬಹಿರಂಗಪಡಿಸಬೇಕೆಂಬ ಮಾಧ್ಯಮಗಳ ವರದಿಗಳ ವಿಚಾರದಲ್ಲೂ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಬ್ಯಾಂಕುಗಳಿಗೆ ಗೊತ್ತಿಲ್ಲವೇ?

ಇದರರ್ಥ ಬ್ಯಾಂಕುಗಳಿಗೆ ನನ್ನ ಆಸ್ತಿ ವಿವರಗಳು ಗೊತ್ತಿಲ್ಲ ಎಂದೇ? ಸಂಸತ್ತಿಗೆ ನಾನು ನೀಡಿರುವ ಮಾಹಿತಿಯನ್ನಾದರೂ ಒಮ್ಮೆ ಕಣ್ಣಾಡಿಸಿ ಎಂದವರು ಹರಿಹಾಯ್ದಿದ್ದಾರೆ. ಅರುವತ್ತು ವರ್ಷ ವಯಸ್ಸಿನ ಮದ್ಯದ ದೊರೆಯು ಪಡೆದಿರುವ ಬಡ್ಡಿ ಸಮೇತ ಒಂಬತ್ತು ಸಾವಿರ ಕೋಟಿ ರೂಪಾಯಿ ಸಾಲಕ್ಕೆ ಸಂಬಂಧಿಸಿದಂತೆ ಮಲ್ಯ ದೇಶ ಬಿಟ್ಟು ಹೋಗದಂತೆ ಬ್ಯಾಂಕುಗಳು ಕೋರ್ಟ್ ಮೊರೆ ಹೋಗುವಷ್ಟರಲ್ಲೇ ಅವರು ಕಳೆದ ಎರಡರಂದೇ ದೇಶ ಬಿಟ್ಟು ತೆರಳಿದ್ದರು.

ಎಲ್ಲಿ, ಎತ್ತಕ್ಕೆ ಗಾಢ ಮೌನ

ಆದಾಗ್ಯೂ ಪ್ರಸ್ತುತ ತಾವು ಈಗ ಇರುವುದು ಎಲ್ಲಿ ಎಂಬ ವಿಚಾರದಲ್ಲಿ ಮಾತ್ರ ಅವರು ಗಾಢ ಮೌನ ತಾಳಿದ್ದಾರೆ. ಲಂಡನ್‌ನ ಉತ್ತರ ದಿಕ್ಕಿನಲ್ಲಿ ಒಂದು ಗಂಟೆ ಪ್ರಯಾಣ ಅವಧಿ ದೂರದಲ್ಲಿ ಇರುವ ತಮ್ಮ ಮನೆಯಲ್ಲಿ ಅವರು ತಂಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿಬಿಐ ಕಣ್ಗಾವಲಿನಲ್ಲಿದ್ದರೂ ಕೂಡ ಅದ್ಹೇಗೆ ಅವರು ದೇಶ ಬಿಟ್ಟು ಹೋದರು ಎಂಬ ವಿಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ಸೇರಿದಂತೆ ಪ್ರತಿಪಕ್ಷ ನಾಯಕರು ಸಂಸತ್ತಿನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Write A Comment