ಚೆನ್ನೈ: ಮೇ 16ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿ ಸಂಚಲನ ಮೂಡಿಸಿದ್ದ ಕ್ಯಾಪ್ಟನ್ ವಿಜಯಕಾಂತ್ ಸಾರಥ್ಯದ ಡಿಎಂಡಿಕೆ ಇದೀಗ ಉಲ್ಟಾ ಹೊಡೆದಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಎಂಡಿಎಂಕೆ ನಾಯಕ ವೈಕೋ ನೇತೃತ್ವದ ನಾಲ್ಕು ಪಕ್ಷಗಳ ಕೂಟ ಪಿಡಬ್ಲ್ಯುಎಫ್ (ಪೀಪಲ್ಸ್ ವೆಲ್‌ಫೇರ್ ಫ್ರಂಟ್) ಜತೆ ಕೈಜೋಡಿಸಿದೆ.
ಇದಕ್ಕೆ ಪ್ರತಿಯಾಗಿ ವಿಜಯ ಕಾಂತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಪಿಡಬ್ಲ್ಯುಎಫ್ ಸಮ್ಮತಿ ಸೂಚಿಸಿದೆ. ತಮಿಳುನಾಡಿನ 234 ಕ್ಷೇತ್ರಗಳ ಪೈಕಿ ಡಿಎಂಡಿಕೆ 124ರಲ್ಲಿ ಸ್ಪರ್ಧಿಸಲು ಅವಕಾಶ ಪಡೆದರೆ, ಉಳಿದ 110 ಸ್ಥಾನಗಳಲ್ಲಿ ಪಿಡಬ್ಲ್ಯುಎಫ್ನ ಅಂಗಪಕ್ಷಗಳಾದ ಎಂಡಿಎಂಕೆ, ಸಿಪಿಎಂ, ಸಿಪಿಐ ಹಾಗೂ ವಿಸಿಕೆ ಕಣಕ್ಕಿಳಿಯಲಿವೆ. ಈ ಬೆಳವಣಿಗೆಯಿಂದಾಗಿ ವಿಜಯಕಾಂತ್ ಅವರನ್ನು ಸೆಳೆಯಲು ಪ್ರಯತ್ನಿಸಿದ್ದ ಡಿಎಂಕೆ, ಬಿಜೆಪಿಗೆ ಹಿನ್ನಡೆಯಾಗಿದೆ. ಆದರೆ, ವೈಕೋ-ವಿಜಯಕಾಂತ್ ನಡೆಯಿಂದ ತಮಗೇನೂ ನಷ್ಟವಿಲ್ಲ. ಡಿಎಂಕೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಡಿಎಂಕೆ ನೇತಾರ ಎಂ.ಕೆ. ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.
-ಉದಯವಾಣಿ