ಕೋಲ್ಕತಾ: ಈಡನ್ ಗಾರ್ಡನ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 4 ವಿಕೆಟ್ ಗಳ ರೋಚಕ ಜಯ ದಾಖಲಿಸುವ ಮೂಲಕ 2016ನೇ ಸಾಲಿನ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದೆ.
ಕೋಲ್ಕತಾದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ವೆಸ್ಟ್ ಇಂಡೀಸ್ ತಂಡ 2ನೇ ಬಾರಿಗೆ ಚುಟುಕು ಕ್ರಿಕೆಟ್ ಚಾಂಪಿಯನ್ ಆಗುವ ಮೂಲಕ, 2 ಬಾರಿ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಗ್ಲೆಂಡ್ ನೀಡಿದ 156 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನುಹತ್ತಿದ ವೆಸ್ಟ್ ಇಂಡೀಸ್ ತಂಡ ಸ್ಯಾಮುಯೆಲ್ಸ್ (ಅಜೇಯ 85 ರನ್) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದಾಗಿ 19.4 ಓವರ್ ಗಳಲ್ಲಿ 161 ರನ್ ಸಿಡಿಸುವ ಮೂಲಕ ಫೈನಲ್ ನಲ್ಲಿ ಅಮೋಘ ಜಯ ದಾಖಲಿಸಿದೆ.
ಇಂಗ್ಲೆಂಡ್ ನೀಡಿದ 156 ರನ್ ಗಳ ಗುರಿ ಬೆನ್ನುಹತ್ತಿದ ವೆಸ್ಟ್ ಇಂಡೀಸ್ ಗೆ ಜೋ ರೂಟ್ ಭಾರಿ ಆಘಾತ ನೀಡಿದರು. ಆರಂಭಿಕ ಆಟಗಾರರಾದ ಚಾರ್ಲ್ಸ್ (1ರನ್) ಮತ್ತು ದೈತ್ಯ ಕ್ರಿಸ್ ಗೇಯ್ಲ್ (4 ರನ್) ರನ್ನು ರೂಟ್ ತುಂಬಾ ಬೇಗನೇ ಪೆವಿಲಿಯನ್ ಗೆ ಅಟ್ಟಿದರು. ಭಾರತದ ವಿರುದ್ಧ ಸೆಮಿಫೈನಲ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಲೆಂಡ್ಲ್ ಸಿಮಾನ್ಸ್ ವಿಲ್ಲೆ ಅವರ ಎಲ್ ಬಿ ಬಲೆಗೆ ಬಿದ್ದರು. ಸಿಮಾನ್ಸ್ ಈ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದರು. ಬಳಿಕ ಕ್ರೀಸ್ ಗೆ ಆಗಮಿಸಿತ ಸ್ಯಾಮುಯೆಲ್ಸ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತ ಕ್ರೀಸ್ ನಲ್ಲಿ ನೆಲೆಯೂರವ ಪ್ರಯತ್ನ ಮಾಡಿದರು. ಅವರ ಈ ಪ್ರಯತ್ನ ಸಫಲವಾಗಿತ್ತು. ನೋಡ ನೋಡುತ್ತಲೇ ಸ್ಯಾಮುಯೆಲ್ಸ್ ಅರ್ಧಶತಕ ಪೂರ್ಣಗೊಳಿಸಿದರು. ಸ್ಯಾಮುಯೆಲ್ಸ್ ಅವರಿಗೆ ಡ್ವೇಯ್ನ್ ಬ್ರಾವೋ ಉತ್ತಮ ಸಾಥ್ ನೀಡಿದರು. ತಂಡದ ಮೊತ್ತ 86 ರನ್ ಗಳಾಗಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಬ್ರಾವೋ ರಷೀದ್ ಬೌಲಿಂಗ್ ನಲ್ಲಿ ರೂಟ್ ಗೆ ಕ್ಯಾಚಿತ್ತು ನಿರ್ಗಮಿಸಿದರು.
ಬಳಿಕ ರಸೆಲ್ ಕೂಡ 1 ರನ್ ಗಳಿಸಿ ಸಿಕ್ಸರ್ ಸಿಡಿಸುವ ಪ್ರಯತ್ನದಲ್ಲಿ ವಿಲ್ಲೆಗೆ ವಿಕೆಟ್ ಒಪ್ಪಿಸಿದರೆ, ನಾಯಕ ಸಾಮಿ ಬಂದಷ್ಟೇ ವೇಗವಾಗಿ 2 ರನ್ ಗಳಿಸಿ ಮತ್ತದೇ ವಿಲ್ಲೆಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ವಿಂಡೀಸ್ ಗೆ ಸೋಲಿನ ಭೀತಿ ಕಂಡಿತ್ತು. ಆದರೆ ಬಳಿಕ ಬಂದ ಕೆಳ ಕ್ರಮಾಂಕದ ಬ್ಯಾಟ್ಸಮನ್ ಬ್ರಾಥ್ ವೇಟ್ ಉತ್ತಮವಾಗಿ ಆಡುತ್ತಿದ್ದ ಸ್ಯಾಮುಯೆಲ್ಸ್ ಗೆ ಉತ್ತಮ ಸಾಥ್ ನೀಡಿದರು. ಕೇವಲ 10 ಎಸೆತಗಳನ್ನು ಎದುರಿಸಿದ ಬ್ರಾಥ್ ವೇಟ್ ಅಂತಿಮ ಓವರ್ ನಲ್ಲಿ ಸ್ಫೋಟ ಬ್ಯಾಟಿಂಗ್ ಮಾಡುವ ಮೂಲಕ 4 ಸಿಕ್ಸರ್ ಸಿಡಿಸಿ ತಮ್ಮ ವೈಯುಕ್ತಿಕ ಗಳಿಕೆಯನ್ನು 34 ರನ್ ಗಳಿಗೆ ಏರಿಸಿಕೊಂಡರು.
ಗೆಲ್ಲಲು ಅಂತಿಮ ಓವರ್ ನಲ್ಲಿ 19 ರನ್ ಗಳ ಅವಶ್ಯಕತೆ ಇದ್ದಾಗ, ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗೆನ್ ಬೆನ್ ಸ್ಟೋಕ್ಸ್ ಕೈಗೆ ಬಾಲ್ ನೀಡಿದರು. ಆದರೆ ಕ್ರೀಸ್ ನಲ್ಲಿದ್ದ ಬ್ರಾಥ್ ವೇಟ್ ಇಂಗ್ಲೆಂಡ್ ಲೆಕ್ಕಾಚಾರಗಳನ್ನು ಕ್ಷಣಾರ್ಧದಲ್ಲಿ ತಲೆಕಳಗೆ ಮಾಡಿ 4 ಎಸೆತಗಳಲ್ಲಿ ಸತತ 4 ಸಿಕ್ಸರ್ ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ ತಂಡದ ರೋಚಕ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಇಂಗ್ಲೆಂಡ್ ಪರ ವಿಲ್ಲೆ 3 ವಿಕೆಟ್ ಕಬಳಿಸಿದರೆ, ರೂಟ್ 2 ಮತ್ತು ರಷೀದ್ 1 ವಿಕೆಟ್ ಗಳಿಸಿದರು.
ಇದಕ್ಕೂ ಮೊದಲು ಡಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಆರಂಭಿಕನಾಗಿ ಕಣಕ್ಕಿಳಿದ ಇಂಗ್ಲೆಂಡ್ ನ ಸೆಮಿಫೈನಲ್ ಹೀರೋ ಜೇಸನ್ ರಾಯ್ ಶೂನ್ಯಕ್ಕೆ ಔಟ್ ಆದರು. ಬಳಿಕ ಹೇಲ್ಸ್ ಕೂಡ 1 ರನ್ ಗೆ ಔಟ್ ಆಗುವ ಮೂಲಕ ಇಂಗ್ಲೆಂಡ್ ತಂಡವನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದರು. ಆದರೆ ಆ ಬಳಿಕ ಬಂದ ಜೋ ರೂಟ್ ಸಮಯೋಚಿತವಾಗಿ ಆಡಿ 36 ಎಸೆತಗಳಲ್ಲಿ 54 ಗಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು. ರೂಟ್ ಗೆ ಮಧ್ಯಮ ಕ್ರಮಾಂಕದ ಆಟಗಾರ ಜೋಸ್ ಬಟ್ಲರ್ (36 ರನ್ ) ಉತ್ತಮ ಸಾಥ್ ನೀಡಿದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಬಟ್ಲರ್ ಬ್ರಾಥ್ ವೇಟ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸ್ಟೋಕ್ಸ್ 13 ರನ್ ಗಳಿಸಿ ಔಟ್ ಆದರೆ, ಅಲಿ ಶೂನ್ಯಕ್ಕೆ ನಿರ್ಗಮಿಸಿದರು. ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 111 ರನ್ ಗಳಾಗಿದ್ದಾಗ ಬ್ರಾಥ್ ವೇಟ್ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ರೂಟ್ ವಿಂಡೀಸ್ ತಂಡದ ಬೆನ್ ಗೆ ಕ್ಯಾಚಿತ್ತು ಔಟ್ ಆದರು.
ಅಂತಿಮವಾಗಿ ವಿಂಡೀಸ್ ಪ್ರಭಾವಿ ಬೌಲಿಂಗ್ ನ ಹೊರತಾಗಿಯೂ ಉತ್ತಮ ಪ್ರದರ್ಶನ ನೀಡಿದ ಬಾಲಂಗೋಚಿಗಳಾದ ಜೋರ್ಡಾನ್ (12), ವಿಲ್ಲೆ (21) ಅವರ ನೆರವಿನಿಂದಾಗಿ ಇಂಗ್ಲೆಂಡ್ ತಂಡ 150 ರನ್ ಗಳ ಗುರಿ ದಾಟಿತು. ಅಲ್ಲದೆ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಗಳನ್ನು ಕಲೆಹಾಕಿತು. ವೆಸ್ಟ್ ಇಂಡೀಸ್ ಪರ ಮೊದಲ ಓವರ್ ಎಸೆದ ಸ್ಪಿನ್ನರ್ ಬದ್ರಿ 2 ವಿಕೆಟ್ ಕಬಳಿಸಿದರೆ, ರಸೆಲ್ 1 ಮತ್ತು ಬ್ರಾಥ್ ವೇಟ್ ಮತ್ತು ಬ್ರಾವೋ ತಲಾ 3 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು ಒತ್ತಡದಲ್ಲಿ ಸಿಲುಕಿಸಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳ ಮೊತ್ತ ಪೇರಿಸಿತು.