ರಿಯಾದ್: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಶೀಘ್ರವೇ ಜಾರಿಗೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐದು ದಿನಗಳ ವಿದೇಶಿ ಪ್ರವಾಸದ ಕೊನೆಯ ಹಂತದಲ್ಲಿ ಎರಡು ದಿನಗಳ ಸೌದಿ ಅರೇಬಿಯಾ ಭೇಟಿಯಲ್ಲಿರುವ ಪ್ರಧಾನಿ, ಸೌದಿ ಕಂಪೆನಿಗಳ ಸಿಇಒ ಹಾಗೂ ಭಾರತೀಯ ಉದ್ಯಮ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ಜಾಗತಿಕ ಬಂಡವಾಳದಾರರಿಗೆ ಹೂಡಿಕೆ ಸ್ನೇಹಿ ವಾತಾವರಣ ಒದಗಿಸುವ ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ರೈಲ್ವೆ, ರಕ್ಷಣೆ ಹಾಗೂ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು.
ಜಿಎಸ್‌ಟಿ ಕುರಿತು ಚಿಂತಿತರಾಗಿದ್ದೀರಿ. ಅದರ ಬಗ್ಗೆ ಚಿಂತೆ ಬೇಡ. ಶೀಘ್ರವೇ ಅದು ಜಾರಿಯಾಗಲಿದೆ. ನಾನು ಗಡುವು ನೀಡಲು ಸಾಧ್ಯವಿಲ್ಲ. ಆದರೆ, ಬಹುಬೇಗ ಅದು ಜಾರಿಗೆ ಬರಲಿದೆ. ಇದು ನಮ್ಮ ಬದ್ಧತೆಯಾಗಿದ್ದು, ಅದು ಜಾರಿ ಹಾದಿಯಲ್ಲಿದೆ’ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೂರ್ವಾನ್ವಯ ತೆರಿಗೆ ಸಂಗ್ರಹ ನಿಟ್ಟಿನಲ್ಲಿ ಕಾಯ್ದೆ ತಿದ್ದುಪಡಿಯು ಇತಿಹಾಸಕ್ಕೆ ಸೇರಿದ ಮಾತು ಎಂದು ಮೋದಿ ತಿಳಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಬಾಕಿ ಇರುವ ಎರಡು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅದರ ಕುರಿತು ಏನೂ ಮಾಡಲಾಗದು. ಇದೀಗ, ಪೂರ್ವಾನ್ವಯ ತೆರಿಗೆ ಎಂಬುದು ಭಾರತದಲ್ಲಿ ಭೂತಕಾಲದ ಸಂಗತಿ. ಮುಂದೆನೂ ಅದು ಜಾರಿಯಾಗದು’ ಎಂದು ಪ್ರತಿಕ್ರಿಯಿಸಿದ್ದಾರೆ.