ರಾಷ್ಟ್ರೀಯ

ಕನಿಷ್ಠ ನಿಯಮಗಳನ್ನು ಪಾಲಿಸದೇ ಇದ್ದುದು ದೇವಾಲಯದ ಪಟಾಕಿ ಸ್ಫೋಟ ದುರಂತಕ್ಕೆ ಕಾರಣ; ತೀವ್ರಗೊಂಡ ಪಟಾಕಿ ದುರಂತ ತನಿಖೆ: ಆರು ಜನರ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

People walk past debris after a fire broke out at a temple in Kollam in the southern state of Kerala, India, April 10, 2016. A huge fire swept through a temple in India's southern Kerala state early on Sunday (April 10), killing nearly 80 people and injuring over 200 gathered for a fireworks display to mark the start of the local Hindu new year. REUTERS/Sivaram V

ಕೊಲ್ಲಂ, ಕೇರಳ (ಪಿಟಿಐ): ಸಿಡಿಮದ್ದು ಪ್ರದರ್ಶನದ ವೇಳೆ ಅನುಸರಿಸಬೇಕಾದ ಕನಿಷ್ಠ ನಿಯಮಗಳನ್ನು ಪಾಲಿಸದೇ ಇದ್ದುದು ಪುಟ್ಟಿಂಗಲ್‌ ದೇವಿ ದೇವಾಲಯದ ಪಟಾಕಿ ಸ್ಫೋಟ ದುರಂತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನಿಯಮಗಳನ್ನು ಗಾಳಿಗೆ ತೂರಿದ್ದು ಮಾತ್ರವಲ್ಲದೆ, ಯಾವುದೇ ಮುನ್ನೆಚ್ಚರಿಕೆ ಕ್ರಮ ಕೂಡಾ ಕೈಗೊಂಡಿರಲಿಲ್ಲ ಎಂಬ ಅಂಶ ಬಯಲಾಗಿದೆ.

‘ಸ್ಫೋಟಕಗಳ ಕಾಯ್ದೆಯ ನಿಯಮಗಳನ್ನು ಪೂರ್ಣವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಮುಖ್ಯ ಸ್ಫೋಟಕ ನಿಯಂತ್ರಕ ಸುದರ್ಶನ್‌ ಕಮಲ್‌ ಸೋಮವಾರ ಹೇಳಿದ್ದಾರೆ.

‘ಪ್ರದರ್ಶನಕ್ಕೆ ಬಳಸಿರುವ ಸ್ಫೋಟಕಗಳ ಬಗ್ಗೆ ಮಾಹಿತಿ ಕಲೆಹಾಕಲು ಇಲ್ಲಿಗೆ ಬಂದಿದ್ದೇವೆ. ಪಟಾಕಿಗಳನ್ನು ನಿರ್ಮಿಸಿದವರು ನಿಷೇಧಿತ ರಾಸಾಯನಿಕ ವಸ್ತುಗಳನ್ನು ಬಳಸಿದ್ದಾರೆ’ ಎಂದು ತಿಳಿಸಿದ್ದಾರೆ.

ಸಾವಿನ ಸಂಖ್ಯೆ 109ಕ್ಕೆ ಏರಿಕೆ: ಪಟಾಕಿ ಸ್ಫೋಟ ದುರಂತದಲ್ಲಿ ಬಲಿಯಾದವರ ಸಂಖ್ಯೆ 109ಕ್ಕೇರಿದೆ. ಭಾನುವಾರ ಬೆಳಗಿನ ಜಾವ ಸಂಭವಿಸಿದ್ದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರು ತಿರುವನಂತಪುರದ ವಿವಿಧ ಆಸ್ಪತ್ರೆಗಳಲ್ಲಿ ಸೋಮವಾರ ಮೃತಪಟ್ಟಿದ್ದಾರೆ.

ಸರ್ಕಾರ ನೇಮಿಸಿರುವ ವೈದ್ಯರ ತಂಡವೊಂದು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದೆ. ಸತ್ತವರಲ್ಲಿ 14 ಮಂದಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ‘ಮೃತದೇಹಗಳು ಸುಟ್ಟುಕರಕಲಾಗಿರುವ ಕಾರಣ ಗುರುತು ಪತ್ತೆಹಚ್ಚುವುದು ಸವಾಲಿನ ಕೆಲಸ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಕರಣ ದಾಖಲು: ಅವಘಡಕ್ಕೆ ಸಂಬಂಧಿಸಿದಂತೆ ಪೊಲೀಸರು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಡಿಮದ್ದು ಪ್ರದರ್ಶನದ ಗುತ್ತಿಗೆದಾರರ ಸಹಾಯಕರು ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತರ ಐವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಅವರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ‘ಘಟನೆ ನಡೆದ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಕ್ರೈಂಬ್ರಾಂಚ್‌ ಅಧಿಕಾರಿಗಳು ತನಿಖೆಗೆ ಚಾಲನೆ ನೀಡಿದ್ದಾರೆ’ ಎಂದು ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿರುವ ಎಡಿಜಿಪಿ (ಕ್ರೈಂಬ್ರಾಂಚ್‌) ಎಸ್‌. ಅನಂತಕೃಷ್ಣನ್‌ ತಿಳಿಸಿದ್ದಾರೆ.

‘ಎಲ್ಲ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಕಲೆಹಾಕಿದ ಬಳಿಕ ಇನ್ನಷ್ಟು ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗುವುದು’ ಎಂದು ಹೇಳಿದ್ದಾರೆ.

ಇಬ್ಬರು ಗುತ್ತಿಗೆದಾರರಾದ ಸುರೇಂದ್ರನ್‌ ಮತ್ತು ಕೃಷ್ಣಕುಟ್ಟಿ ಅವರ ಸಹಾಯಕರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರು ಗುತ್ತಿಗೆದಾರರು ದೇವಸ್ಥಾನದಲ್ಲಿ ಸಿಡಿಮದ್ದು ಪ್ರದರ್ಶನದ ಸ್ಪರ್ಧೆ ಏರ್ಪಡಿಸಿದ್ದರು.

ಎನ್‌ಎಚ್‌ಆರ್‌ಸಿ ನೋಟಿಸ್‌ (ನವದೆಹಲಿ ವರದಿ): ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಪುಟ್ಟಿಂಗಲ್‌ ದೇವಾಲಯ ದುರಂತಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೊಲ್ಲಂ ಜಿಲ್ಲೆಯ ಉನ್ನತ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಿದ್ದು, ನಾಲ್ಕು ವಾರಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದೆ.

ಪಟಾಕಿ ತಯಾರಿಕಾ ಸಾಮಗ್ರಿ ವಶ: ದುರಂತ ನಡೆದ ಪುಟ್ಟಿಂಗಲ್‌ನ ಸಮೀಪದ ಅಟ್ಟಿಂಗಲ್‌ ಎಂಬಲ್ಲಿ ಕಟ್ಟಡವೊಂದರಲ್ಲಿ ದಾಸ್ತಾನು ಇರಿಸಿದ್ದ ಸುಮಾರು 100 ಕೆ.ಜಿ ಯಷ್ಟು ಪಟಾಕಿ ತಯಾರಿಕಾ ಸಾಮಗ್ರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

‘ಪಟಾಕಿ ತಯಾರಿಕಾ ಸಾಮಗ್ರಿಗಳು ತುಂಬಿದ್ದ ಎರಡು ಕಾರುಗಳನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ಈ ಕಾರುಗಳು ಗುತ್ತಿಗೆದಾರ ಸುರೇಂದ್ರನ್‌ಗೆ ಸೇರಿದ್ದು’ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪೂರ್ಣ ನಿಷೇಧ ಇಲ್ಲ (ತಿರುವನಂತಪುರ ವರದಿ): ಕೊಲ್ಲಂನಲ್ಲಿ ನಡೆದ ದುರಂತದ ಕಾರಣದಿಂದ ದೇವಾಲಯಗಳಲ್ಲಿ ಸಿಡಿಮದ್ದು ಪ್ರದರ್ಶನದ ಮೇಲೆ ನಿಷೇಧ ಹೇರಬೇಕು ಎಂಬ ಕೂಗು ಹೆಚ್ಚಿನ ಬಲ ಪಡೆದುಕೊಂಡಿದೆಯಾದರೂ, ‘ಸಿಡಿಮದ್ದು ಪ್ರದರ್ಶನದ ಮೇಲೆ ಸಂಪೂರ್ಣ ನಿಷೇಧ ಇಲ್ಲ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿದೆ.

‘ಹೆಚ್ಚಿನ ದೇವಾಲಯಗಳಲ್ಲಿ ಸಿಡಿಮದ್ದು ಪ್ರದರ್ಶನವು ದೇವಾಲಯದ ಆಚರಣೆಯ ಭಾಗವಾಗಿದೆ. ಆದ್ದರಿಂದ ನಮಗೆ ನಿಷೇಧ ಹೇರಲು ಸಾಧ್ಯವಿಲ್ಲ’ ಎಂದು ಮಂಡಳಿಯ ಅಧ್ಯಕ್ಷ ಪ್ರಯಾರ್‌ ಗೋಪಾಲಕೃಷ್ಣನ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ.

‘ಆದರೆ ಸರ್ಕಾರದ ನಿರ್ಬಂಧ ಮತ್ತು ನ್ಯಾಯಾಲಯಗಳ ಆದೇಶಕ್ಕೆ ಅನುಗುಣವಾಗಿ ಇಂತಹ ಪ್ರದರ್ಶನ ನಡೆಯಬೇಕು. ಮಾತ್ರವಲ್ಲ, ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು’ ಎಂದಿದ್ದಾರೆ.

ನಿಯಮಗಳಿಗೆ ಅನುಗುಣವಾಗಿ ಸಿಡಿಮದ್ದು ಪ್ರದರ್ಶನ ನಡೆಸುವಂತೆ ಸೂಚಿಸಿ ದೇವಸ್ವಂ ಮಂಡಳಿ ತನ್ನ ಅಧೀನದಲ್ಲಿರುವ ಎಲ್ಲ ದೇವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ ಅಡಿಯಲ್ಲಿ ಕೇರಳದ 1,255 ದೇವಸ್ಥಾನಗಳು ಇವೆ.

ಸಿಡಿಮದ್ದು ತಯಾರಿಕೆ– ವರದಿಗೆ ಸೂಚನೆ(ಮಂಗಳೂರು ವರದಿ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಅಧಿಕೃತ ಸಿಡಿಮದ್ದು ತಯಾರಿಕಾ ಘಟಕಗಳಿವೆ. ಈ ಘಟಕಗಳಲ್ಲಿ ಅಳವಡಿಸಿರುವ ಸುರಕ್ಷತಾ ಕ್ರಮಗಳ ಕುರಿತು ವಾರದೊಳಗೆ ವರದಿ ನೀಡುವಂತೆ ಉಪ ವಿಭಾಗಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಸೂಚಿಸಿದ್ದಾರೆ.

ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್‌ನಲ್ಲಿ ನಡೆದ ಸಿಡಿ ಮದ್ದು ದುರ್ಘಟನೆ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು. ಸುರಕ್ಷತೆ ಕುರಿತು ವರದಿ ನೀಡಲು ಜಿಲ್ಲೆಯ ಇಬ್ಬರು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ಈ ತಂಡವು ಘಟಕಗಳಿಗೆ ಭೇಟಿ ನೀಡಿ ವಾರದಲ್ಲಿ ವರದಿ ನೀಡಲು ತಿಳಿಸಲಾಯಿತು. ಅನಧಿಕೃತ ಸಿಡಿ ಮದ್ದು ಘಟಕಗಳ ಕುರಿತು ಸಾರ್ವಜನಿಕರು ಮಾಹಿತಿ ನೀಡಲು ಸಭೆ ಕೋರಿದೆ.
ಅನುಮತಿ ಪಡೆಯದೆ ಸಿಡಿಮದ್ದು ಸುಡಬಾರದು. ನಿಗದಿತ ಶುಲ್ಕ ಮತ್ತು ಅಗತ್ಯ ದಾಖಲೆ ಸಲ್ಲಿಸಿ ಸಿಡಿಮದ್ದು ಪ್ರದರ್ಶನ ಮಾಡಲು ಆದೇಶ ನೀಡಲಾಗಿದೆ.

ಕೇರಳ ಹೈಕೋರ್ಟ್‌ ಮಧ್ಯಪ್ರವೇಶ: ದೇವಾಲಯಗಳಲ್ಲಿ ಸಿಡಿಮದ್ದು ಪ್ರದರ್ಶನ ನಿಷೇಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಲು ಕೇರಳ ಹೈಕೋರ್ಟ್‌ ನಿರ್ಧರಿಸಿದೆ.

ನ್ಯಾಯಮೂರ್ತಿ ವಿ. ಚಿದಂಬರೇಶ್‌ ಅವರು ಸೋಮವಾರ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಪತ್ರ ಬರೆದು, ‘ಕೇರಳದ ದೇವಾಲಯಗಳಲ್ಲಿ ನಡೆಯುವ ಅಪಾಯಕಾರಿ ಸಿಡಿಮದ್ದು ಪ್ರದರ್ಶನವನ್ನು ನಿಷೇಧಿಸುವ ವಿಚಾರದಲ್ಲಿ ನ್ಯಾಯಾಂಗದ ಮಧ್ಯಪ್ರವೇಶ ಅಗತ್ಯ’ ಎಂದು ಮನವಿ ಮಾಡಿದ್ದಾರೆ.

ಹೈಕೋರ್ಟ್‌ನ ವಿಭಾಗೀಯ ಪೀಠ ಈ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿ ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

Write A Comment