ಲಖನೌ: ಎನ್ಐಎ ಅಧಿಕಾರಿ ಮೊಹಮ್ಮದ್ ತಂಜೀಲ್ ಅಹ್ಮದ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೊಲೀಸರು ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
ಬಂಧನಕ್ಕೊಳಗಾಗಿರುವವರನ್ನು ಜೈನುಲ್ ಮತ್ತು ರಿಯಾನ್ ಎಂದು ಹೇಳಲಾಗುತ್ತಿದೆ. ಈ ಹಿಂದಷ್ಟೇ ಅಧಿಕಾರಿ ಹತ್ಯೆ ಹಿಂದಿನ ಮಾಸ್ಟರ್ ಮೈಂಡ್ ಎಂದೇ ಹೇಳಲಾಗುತ್ತಿದ್ದ ಮುನೀರ್ ನನ್ನು ಕುರಿತಂತೆ ಮಾಹಿತಿ ನೀಡಿದರೆ ರು. 50 ಸಾವಿರ ಬಹುಮಾನ ನೀಡುವುದಾಗಿ ಅಲ್ಲಿನ ಪೊಲೀಸರು ಘೋಷಣೆ ಮಾಡಿದ್ದರು. ಪ್ರಕರಣ ಸಂಬಂಧ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ ಈ ವರೆಗೂ 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿರುವುದಾಗಿ ತಿಳಿದುಬಂದಿದೆ.
ಕಳೆದ ವಾರ ಬಿಜ್ನೋರ್ ನಲ್ಲಿ ನಡೆದ ಸಂಬಂಧಿಕರ ಮದುವೆಗೆ ಹೋಗಿ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ವಾಪಸಾಗುತ್ತಿದ್ದ ತನಿಖಾಧಿಕಾರಿ ತಂಜಿಲ್ ಅಹ್ಮದ್ ಅವರ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ಮಳೆ ಸುರಿಸಿದ್ದರು. ಈ ವೇಳೆ ಅಧಿಕಾರಿ ದೇಹದೊಳಗೆ 24 ಗುಂಡುಗಳು ಹೊಕ್ಕಿ ಸಾವನ್ನಪ್ಪಿದ್ದರು.