ನವದೆಹಲಿ: ತಮಿಳಿನ ಖ್ಯಾತ ನಟ ರಜನಿಕಾಂತ್, ಟೆನಿಸ್ ತಾರೆ ಸಾನಿಯಾ ಮಿರ್ಜಾ, ಬಾಲಿವುಡ್ ನಟ, ನಟಿಯರಾದ ಪ್ರಿಯಾಂಕಾ ಚೋಪ್ರಾ, ಅಜಯ್ ದೇವಗನ್ ಸೇರಿದಂತೆ ಹಲವು ಸಾಧಕರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಂಗಳವಾರ ದೇಶದ ಅತ್ಯುನ್ನತ ನಾಗರಿಕ ಗೌರವ ಪದ್ಮ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಆಕರ್ಷಕ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್, ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಸಚಿವರು, ಅಧಿಕಾರಿಗಳು ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.
ರಾಷ್ಟ್ರಪತಿಯವರು ಇಂದು ನಡೆದ ಸಮಾರಂಭದಲ್ಲಿ ಐವರಿಗೆ ಪದ್ಮ ವಿಭೂಷಣ, ಎಂಟು ಮಂದಿಗೆ ಪದ್ಮ ಭೂಷಣ ಹಾಗೂ 43 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ನಿಂಬೆ ಹಸಿರು ಬಣ್ಣದ ಸೀರೆಯಲ್ಲಿ ದೇಸಿ ಹುಡುಗಿ ಲುಕ್ ನಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಎಲ್ಲರ ಗಮನ ಸೆಳೆದರು. ಇನ್ನು ಬ್ಯಾಡ್ಮಿಂಟನ್ ತಾರೆ ಸಾನಿಯಾ ಪೀಚ್ ಕಲರ್ ನ ಸಲ್ವಾರ್ ನಲ್ಲಿ ನೆರೆದಿದ್ದವರ ಗಮನ ಸೆಳೆದರು.
ಪದ್ಮ ವಿಭೂಷಣ ಪಡೆದವರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಸ್ಥಾಪಕ ದಿವಂಗತ ಧೀರುಭಾಯಿ ಅಂಬಾನಿ, ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಜಗ್ ಮೋಹನ್, ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ, ಭಾರತ-ಅಮೆರಿಕ ಮೂಲದ ಅರ್ಥಶಾಸ್ತ್ರಜ್ಞ ಅವಿನಾಶ್ ಕಮಲಾಕರ್ ದೀಕ್ಷಿತ್, ಖ್ಯಾತ ನೃತ್ಯಗಾರ್ತಿ ಯಾಮಿನಿ ಕೃಷ್ಣಮೂರ್ತಿ ಹಾಗೂ ನಟ ರಜನಿಕಾಂತ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಟ ಅನುಪಮ್ ಖೇರ್, ಸಂಗೀತಗಾರ ಉದಿತ್ ನಾರಾಯಣ್, ಬ್ಯಾಡ್ಮಿಂಟನ್ ತಾರೆ ಸಾನಿಯಾ ಮಿರ್ಜಾ ಹಾಗೂ ಇತರ 6 ಮಂದಿಗೆ ಪದ್ಮ ಭೂಷಣ, ಪ್ರಿಯಾಂಕಾ ಚೋಪ್ರಾ, ಅಜಯ್ ದೇವಗನ್, ಮಧು ಭಂಡಾರ್ಕರ್, ಎಸ್.ಎಸ್.ರಾಜಮೌಳಿ ಸೇರಿದಂತೆ 43 ಮಂದಿಗೆ ಪದ್ಮಶ್ರೀ ಗೌರವ ನೀಡಿ ರಾಷ್ಟ್ರಪತಿ ಸನ್ಮಾನಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 112 ಮಂದಿಯ ಹೆಸರನ್ನು ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ದಿನ ಪದ್ಮ ಪ್ರಶಸ್ತಿಗೆ ಘೋಷಣೆ ಮಾಡಿತ್ತು.