ಮನೋರಂಜನೆ

ರಾಬಿನ್ ಮಿಂಚು: ಪಂಜಾಬ್ ಕಿಂಗ್ಸ್ ಎದುರು ರೈಡರ್ಸ್‌ಗೆ ಜಯ; ಮಾರ್ಕೆಲ್, ಸುನಿಲ್‌ ಶಿಸ್ತಿನ ದಾಳಿ, ಅಗ್ರಸ್ಥಾನಕ್ಕೇರಿದ ಕೋಲ್ಕತ್ತ

Pinterest LinkedIn Tumblr

gambhir-uthappa

ಮೊಹಾಲಿ: ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ರಾಬಿನ್ ಉತ್ತಪ್ಪ ಅವರ ಬ್ಯಾಟಿಂಗ್ ವೈಭವ ಅಭಿಮಾನಿಗಳ ಕಣ್ಮನ ತುಂಬಿತು. ಅವರ ಮಿಂಚಿನ ಅರ್ಧಶತಕದ ನೆರವಿನಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವು ಆತಿಥೇಯ ಪಂಜಾಬ್ ಕಿಂಗ್ಸ್ ಇಲೆವನ್ ತಂಡದ ಎದುರು 6 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿತು.

ಟಾಸ್ ಗೆದ್ದ ಗೌತಮ್ ಗಂಭೀರ್ ಬಳಗವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಾರ್ನೆ ಮಾರ್ಕೆಲ್ (27ಕ್ಕೆ2) ಮತ್ತು ಸುನಿಲ್ ನಾರಾಯಣ್ (22ಕ್ಕೆ2) ಅವರ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್‌ ಇಲೆವನ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 138 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.

ನಂತರ ಕೋಲ್ಕತ್ತ ತಂಡದ ಆರಂಭಿಕ ಜೋಡಿ ರಾಬಿನ್ ಉತ್ತಪ್ಪ ( 53; 28ಎ, 9ಬೌಂ) ಮತ್ತು ಗೌತಮ್ ಗಂಭೀರ್ (34; 34ಎ, 3ಬೌಂ) ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ತಂಡ 17,1 ಓವರ್‌ಗಳಲ್ಲಿ 4 ವಿಕೆಟ್‌ಗಳಲ್ಲಿ 141 ರನ್‌ಗಳನ್ನು ಗಳಿಸಿತು. ಈ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ಗಂಭೀರ್ ಬಳಗಕ್ಕೆ ಇದು ಮೂರನೇ ಜಯ. ಪಂಜಾಬ್ ತಂಡಕ್ಕೆ ಇದು ಮೂರನೇ ಸೋಲು.

ಮಿಂಚಿದ ಜೋಡಿ: ಮೊದಲ ವಿಕೆಟ್ ಜೊತೆಯಾಟದಲ್ಲಿ ರಾಬಿನ್ ಮತ್ತು ಗಂಭೀರ್ 82 (51ಎಸೆತಗಳು) ರನ್‌ಗಳನ್ನು ಸೇರಿಸಿದರು. ಕಳೆದ ಪಂದ್ಯದಲ್ಲಿ ಅಜೇಯ 90 ರನ್ ಗಳಿಸಿದ್ದ ಮಿಂಚಿದ್ದ ಗಂಭೀರ್ ಈ ಪಂದ್ಯದಲ್ಲಿ ಹೆಚ್ಚು ಅಬ್ಬರಿಸಲಿಲ್ಲ. ರಾಬಿನ್ ಉತ್ತಪ್ಪ ಅವರಿಗೆ ಹೆಚ್ಚು ಅವಕಾಶ ಕೊಟ್ಟರು. ಉತ್ತಪ್ಪ ಕೇವಲ 24 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಆದರೆ ಅವರ ಬ್ಯಾಟ್‌ನಿಂದ ಇವತ್ತು ಒಂದೂ ಸಿಕ್ಸರ್‌ ಸಿಡಿಯಲಿಲ್ಲ. ಆದರೆ, 9 ಆಕರ್ಷಕ ಬೌಂಡರಿಗಳು ದಾಖಲಾದವು.

ಒಂಬತ್ತನೇ ಓವರ್‌ನಲ್ಲಿ ಪ್ರದೀಪ್ ಸಾಹು ಅವರ ಎಲ್‌ಬಿಡಬ್ಲ್ಯು ಬಲೆಗೆ ರಾಬಿನ್ ವಿಕೆಟ್‌ ಬಿದ್ದ ನಂತರ ರನ್‌ ಗಳಿಕೆಯ ವೇಗವು ಕಡಿಮೆಯಾಯಿತು. ತಮ್ಮ ನಂತರದ ಓವರ್‌ನಲ್ಲಿಯೂ ಮಿಂಚಿದ ಸಾಹು ಗಂಭೀರ್ ಅವರ ವಿಕೆಟ್‌ ಅನ್ನೂ ಕಬಳಿಸಿದರು. ಮನೀಷ್ ಪಾಂಡೆ (12 ರನ್) ಮತ್ತು ಶಕೀಬ್ ಅಲ್ ಹಸನ್ (11 ರನ್) ಅವರ ವಿಕೆಟ್‌ಗಳನ್ನು ಅಕ್ಷರ್ ಪಟೇಲ್ ಗಳಿಸಿದರು. ನಂತರ ಜೊತೆ ಗೂಡಿದ ಸೂರ್ಯಕುಮಾರ್ ಯಾದವ್ (ಔಟಾಗದೆ 11) ಮತ್ತು ಯುಸೂಫ್ ಪಠಾಣ್ (ಔಟಾಗದೆ 12) ತಂಡವನ್ನು ಗೆಲುವಿನ ದಡ ಸೇರಿಸಿದರು.

ಮಾರ್ಕೆಲ್, ಸುನಿಲ್ ದಾಳಿ: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎಲ್ಲ ಬೌಲರ್‌ಗಳ ಶಿಸ್ತಿನ ಬೌಲಿಂಗ್ ಮುಂದೆ ಆತಿಥೇಯ ತಂಡದ ಬ್ಯಾಟ್ಸ್‌ಮನ್‌ಗಳು ಪರದಾಡಿದರು.

ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ (26; 22ಎಸೆತ, 4ಬೌಂಡರಿ) ಮತ್ತು ಅರ್ಧಶತಕ ಗಳಿಸಿದ ಶಾನ್ ಮಾರ್ಷ್ (ಔಟಾಗದೆ 56; 41ಎ, 4ಬೌಂ, 1ಸಿ) ಮಾತ್ರ ದಿಟ್ಟ ಹೋರಾಟ ನಡೆಸಿದರು. ಉಳಿದ ಉಳಿದ ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತವನ್ನು ದಾಟಲಿಲ್ಲ.

ಕಳೆದ ಪಂದ್ಯದಲ್ಲಿ ಮಿಂಚಿದ್ದ ಮನನ್ ವೊಹ್ರಾ, ವೃದ್ಧಿಮಾನ್ ಸಹಾ ಕೂಡ ವೈಫಲ್ಯ ಅನುಭವಿಸಿದರು. ಕೋಲ್ಕತ್ತ ತಂಡದ ಬೌಲರ್‌ಗಳಾದ ಉಮೇಶ್ ಯಾದವ್, ಪಿಯೂಷ್ ಚಾವ್ಲಾ ಮತ್ತು ಯುಸೂಫ್ ಪಠಾಣ್ ಅವರು ತಲಾ ಒಂದು ವಿಕೆಟ್ ಗಳಿಸಿದರು.

Write A Comment