ನವದೆಹಲಿ: ಕಳೆದ ವಾರ ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಕೃಪಾಲ್ ಸಿಂಗ್ ದೇಹವನ್ನು ಮಂಗಳವಾರ ದೆಹಲಿಗೆ ತರಲಾಗಿದ್ದು, ಆತನ ದೇಹದಲ್ಲಿ ಕೆಲವು ಅಂಗಾಂಗಗಳು ನಾಪತ್ತೆಯಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಲಾಹೋರ್ ಲಾಖಪತ್ ಜೈಲಿನಿಂದ ಕೃಪಾಲ್ ದೇಹವನ್ನು ಇಂದು ವಾಘಾಗಡಿ ಮೂಲಕ ಭಾರತಕ್ಕೆೆ ತರಲಾಗಿತ್ತು. ಬಳಿಕ ಭಾರತೀಯ ವೈದ್ಯರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು.
ಕೃಪಾಲ್ ಸಿಂಗ್ ದೇಹದಲ್ಲಿ ಕೆಲವು ಭಾಗಗಳು ಇಲ್ಲ ಎಂದು ಮರಣೋತ್ತರ ಪರೀಕ್ಷೆ ನಂತರ ತಿಳಿಸಿದ್ದಾರೆ. ಇದಕ್ಕು ಮುನ್ನ ಪಾಕಿಸ್ತಾನಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ದೇಹದ ಮೇಲೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ ಎಂದಿದ್ದಾರೆ.
ಆಂತರಿಕವಾಗಿ ಅಥವಾ ಬಾಹ್ಯವಾಗಿ ದೇಹದ ಮೇಲೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಆದರೆ ದೇಹದ ಕೆಲವು ಅಂಗಾಂಗಗಳು ನಾಪತ್ತೆಯಾಗಿವೆ. ಪಾಕಿಸ್ತಾನದಲ್ಲಿ ನಡೆದ ಮೊದಲ ಮರಣೋತ್ತರ ಪರೀಕ್ಷೆ ವೇಳೆ ಅವುಗಳನ್ನು ಸ್ಯಾಂಪಲ್ ಗಾಗಿ ತೆಗೆದುಕೊಂಡಿರಬಹುದು ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಅಶೋಕ್ ಅವರು ತಿಳಿಸಿದ್ದಾರೆ.
ಈ ವೇಳೆ ಪಂಜಾಬ್ ಸಚಿವ ಗುಲ್ಜಾರ್ ಸಿಂಗ್ ರಾನಿಕೆ ಮತ್ತು ಅಮೃತ್‌ಸರ ಜಿಲ್ಲಾಧಿಕಾರಿ ವರುಣ್ ರೂಜಾಮ್ ಹಾಗೂ ಕೃಪಾಲ್ ಕುಟುಂಬದ ಸದಸ್ಯರು ಸೇರಿದಂತೆ ನೂರಾರು ಜನರು ಹಾಜರಿದ್ದರು.