ನವದೆಹಲಿ: ಇನ್‌ಕ್ರೆಡಿಬಲ್ ಇಂಡಿಯಾ ಪ್ರಚಾರ ರಾಯಭಾರಿ ಹುದ್ದೆಗೆ ಸಂಬಂಧಿಸಿದಂತೆ ತಮ್ಮನ್ನು ಯಾವತ್ತೂ ಸಂಪರ್ಕಿಸಿಲ್ಲ ಎಂದು ಬಾಲಿವುಡ್ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಅವರು ಮಂಗಳವಾರ ಹೇಳಿದ್ದಾರೆ.
ಬಚ್ಚನ್ ಹಾಗೂ ಕುಟುಂಬಸ್ಥರು ತೆರಿಗೆ ವಂಚಿಸಿ ವಿದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡಿದ ವಿಚಾರ ‘ಪನಾಮಾ ಪೇಪರ್ಸ್’ನಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ ‘ಇನ್‌ಕ್ರೆಡಿಬಲ್ ಇಂಡಿಯಾ’ ರಾಯಭಾರಿ ಸ್ಥಾನದಿಂದ ಬಿಗ್ಬಿ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ವರದಿ ಮಾಡಲಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಗ್ ಬಿ, ಇನ್‌ಕ್ರೆಡಿಬಲ್ ಇಂಡಿಯಾ ರಾಯಭಾರಿ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮಗಳ ವರದಿ ಮಾಡುತ್ತಿವೆ. ಆದರೆ ಆ ಸ್ಥಾನಕ್ಕಾಗಿ ಯಾವತ್ತೂ ಅಧಿಕೃತವಾಗಿ ತಮ್ಮ ಸಂಪರ್ಕಿಸಿಲ್ಲ. ಹೀಗಾಗಿ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದದ್ದು ಎಂದು ಬಚ್ಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಮೀರ್ ಖಾನ್ ಸ್ಥಾನಕ್ಕೆ ಈಗಾಗಲೇ ಅಮಿತಾಬ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಪನಾಮಾ ಪೇಪರ್ಸ್ನಲ್ಲಿ ಬಿಗ್ಬಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ರಾಯಭಾರಿ ಮಾಡುವ ಪ್ರಸ್ತಾಪಕ್ಕೆ ಇದುವರೆಗೆ ಸಹಿಬಿದ್ದಿಲ್ಲ. ಪ್ರಕರಣದಲ್ಲಿ ಕ್ಲೀನ್ಚಿಟ್ ಸಿಗುವ ತನಕ ಈ ರಾಯಭಾರಿಯಾಗಿ ಆಯ್ಕೆ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಈಗಾಗಲೇ ವಿಶೇಷ ತನಿಖಾ ಸಮಿತಿ ರಚಿಸಿದ್ದು, ಅದರ ವರದಿ ಬಂದ ಬಳಿಕ ತೀರ್ವನ ಪ್ರಕಟಿಸಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಅಮಿತಾಬ್, ನನ್ನ ಕುಟುಂಬದ ಹೆಸರನ್ನು ದುರುಪಯೋಗಪಡಿಸಲಾಗಿದೆ ಎಂದಿದ್ದಾರೆ