ಕೊಲ್ಲಂ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಸಮಯ ಆನ್ ಲೈನ್ ನಲ್ಲಿರುತ್ತಾರೆ. ಆದರೆ ಇದನ್ನೇ ಸರಿಯಾಗಿ ಬಳಕೆ ಮಾಡಿಕೊಂಡರೆ ಫೇಸ್ ಬುಕ್ ನಿಂದಲೇ ಬಹುಮಾನ ಗಿಟ್ಟಿಸಬಹುದೆಂಬುದನ್ನು ಕೊಲ್ಲಂ ನ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಾಬೀತುಪಡಿಸಿದ್ದಾನೆ.
ಎಂಇಎಸ್ ಟೆಕ್ನಾಲಜಿ ಹಾಗೂ ಮ್ಯಾನೇಜ್ ಮೆಂಟ್ ನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ 20 ವರ್ಷದ ಅರುಣ್ ಎಸ್ ಕುಮಾರ್, ಫೇಸ್ ಬುಕ್ ನಲ್ಲಿದ್ದ ದೋಷವನ್ನು ಪತ್ತೆ ಮಾಡಿ ಎಚ್ಚರಿಸಿದ್ದಕ್ಕೆ ಫೇಸ್ ಬುಕ್ ಆತನಿಗೆ 7 ಲಕ್ಷ ರೂಪಾಯಿ ಬಹುಮಾನ ನೀಡಿದೆ.
“ಆನ್ ಲೈನ್ ನಲ್ಲಿದ್ದಾಗ ಲುಕ್ಅಸೈಡ್.ಫೇಸ್ ಬುಕ್.ಕಾಂ(lookaside.facebook.com) ನ್ನು ಕಂಡೆ. ಈ ಬಗ್ಗೆ ಮತ್ತಷ್ಟು ಆಳಕ್ಕೆ ಹೋದಂತೆ ಡೊಮೇನ್ ನಲ್ಲಿ ದೋಷವಿರುವುದು ಕಂಡುಬಂತು, ಈ ದೋಷದಿಂದಾಗಿ ಹ್ಯಾಕರ್ ಗಳು ಸುಲಭವಾಗಿ ಯಾವುದೇ ಫೇಸ್ ಬುಕ್ ಅಕೌಂಟ್ ನ್ನು ಅದರ ಮಾಲಿಕರಿಗೆ ತಿಳಿಯದಂತೆ ಅತಿಕ್ರಮಣ ಮಾಡಬಹುದಿತ್ತು. ಈ ದೋಷದ ಬಗ್ಗೆ ಮಾರ್ಚ್ ನಲ್ಲೇ ತಿಳಿದಿತ್ತಾದರೂ ಫೇಸ್ ಬುಕ್ ಇದನ್ನು ಒಪ್ಪಲು ತಯಾರಿರಲಿಲ್ಲ. ಹ್ಯಾಕರ್ ಗಳಿಗೆ ಅನುಕೂಲವಾಗುವ ದೋಷದ ಬಗ್ಗೆ ಫೇಸ್ ಬುಕ್ ಅಧಿಕಾರಿಗಳಿಗೆ ನಿರಂತರವಾಗಿ ಮಾಹಿತಿ ನೀಡಿದ ನಂತರ ಸರಿಪಡಿಸಿದರು ಎಂದು ಅರುಣ್ ಮಾಹಿತಿ ನೀಡಿದ್ದಾರೆ.
ಅಂದಹಾಗೆ ಅರುಣ್ ಗೆ ಫೇಸ್ ಬುಕ್ ಸನ್ಮಾನ ಮಾಡುತ್ತಿರುವುದು ಇದೇ ಮೊದಲಲ್ಲವಂತೆ. ಈ ಹಿಂದೆಯೂ ಫೇಸ್ ಬುಕ್ ಖಾತೆದಾರರ ಭದ್ರತೆಗೆ ಸಂಬಂಧಿಸಿದ ದೋಷಗಳನ್ನು ಗುರುತಿಸಿದ್ದ ಅರುಣ್ ನ್ನು “ಹಾಲ್ ಆಫ್ ಫೇಮ್” ಗೆ ಸೇರ್ಪಡೆಗೊಳಿಸಿತ್ತು ಎಂದು ಸ್ವತಃ ಅರುಣ್ ಹೇಳಿದ್ದಾರೆ.