ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದ್ದವರ ಕುಟುಂಬಸ್ಥರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಲಾ ರು.2 ಲಕ್ಷ ಪರಿಹಾರ ನೀಡುವುದಾಗಿ ಭಾನುವಾರ ಘೋಷಣೆ ಮಾಡಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಹಲವು ದಿನಗಳಿಂದ ಎಡೆಬಿಡದ ಸುರಿದ ಭಾರಿ ಮಳೆಗೆ ಭೂಕುಸಿತ ಸಂಭವಿಸಿದ 17ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಹಲವು ಗಾಯಗೊಂಡಿದ್ದರು. ತವಾಂಗ್ ಜಿಲ್ಲೆ ಪಮ್ಲಾ ಹಳ್ಳಿಯಲ್ಲಿ ಕಟ್ಟಡ ನಿರ್ಮಾಣವೊಂದರಲ್ಲಿ ಹಲವಾರು ಕಾರ್ಮಿಕರು ತೊಡಗಿಕೊಂಡಿದ್ದರು. ಈ ವೇಳೆ ಭೂಕುಸಿತವಾಗಿ ಸಂಭವಿಸಿತ್ತು.
ಘಟನೆ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದರು. ಇದೀಗ ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ಘೋಷಿಸಿದ್ದು, ಮೃತ ಕುಟುಂಬಕ್ಕೆ ತಲಾ ರು.2 ಲಕ್ಷ ಹಾಗೂ ಗಾಯಾಳುಗಳಿಗೆ ರು. 50 ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಇನ್ನು ಘಟನೆ ಸಂಬಂಧ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಗಾಯಾಳುಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ನಂತರ ಮಾತನಾಡಿರುವ ಅವರು, ನೈಸರ್ಗಿಕ ವಿಪತ್ತು ಸಂಭವಿಸಿದ್ದು, ಸಾಕಷ್ಟು ಹಾನಿಯಾಗಿದೆ. ಕೇಂದ್ರದಿಂದ ಮತ್ತಷ್ಟು ನಿಧಿಯನ್ನು ಬಿಡುಗಡೆ ಮಾಡುಲು ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.