ಮಂಡ್ಯ: ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜತೆಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ರಾಜ್ಯ ಜನರಿಗೆ ಸೇವೆ ಸಲ್ಲಿಸಬೇಕು ಎಂದು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅಭಿಪ್ರಾಯಪಟ್ಟರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಜನ್ಮದಿನಾಚರಣೆ ಪ್ರಯುಕ್ತ ನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ಎದುರು ಬಸ್ ತಂಗುದಾಣಕ್ಕೆ ಶಂಕುಸ್ಥಾಪನೆ ಹಾಗೂ ಪ್ರೇರಣಾ ಅಂಧಶಾಲೆ ಮಕ್ಕಳಿಗೆ ಉಪಹಾರ ವಿತರಿಸಿ ಮಾತನಾಡಿದರು.
ಉತ್ತಮ ಸಂಸದೀಯ ಪಟು ಎಸ್.ಎಂ.ಕೃಷ್ಣ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಮುಖ್ಯ ವಾಹಿನಿಗೆ ಬರಬೇಕು. ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ, ಕೇಂದ್ರ ಸಚಿವರಾಗಿ ಅತ್ಯುತ್ತಮ ರೀತಿ ಕಾರ್ಯನಿರ್ವಹಿಸಿರುವ ಎಸ್.ಎಂ.ಕೃಷ್ಣ ಜಿಲ್ಲೆಯ ಹೆಸರನ್ನು ರಾಷ್ಟ್ರ, ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದು ಬಣ್ಣಿಸಿದರು.
ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ ಬಿಸಿಯೂಟ, ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ, ಯಶಸ್ವಿನಿಯಂತಹ ಜನಪರ ಯೋಜನೆಗಳು ಇಂದಿಗೂ ಮುಂದುವರೆಯುತ್ತಿವೆ. ಸಜ್ಜನ ರಾಜಕಾರಣಿ ಎಂದೇ ಗುರುತಿಸಲ್ಪಟ್ಟಿರುವ ಎಸ್.ಎಂ.ಕೃಷ್ಣ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ಇನ್ನಷ್ಟು ಜನಪರ ಕೆಲಸ ಮಾಡುವಂತಾಗಲಿ. ಸಕ್ರಿಯ ರಾಜಕಾರಣದಲ್ಲಿ ತೊಡಗಿ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಲಿ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಉಪಾಧ್ಯಕ್ಷೆ ಸುಜಾತಾಮಣಿ, ಕೆಪಿಸಿಸಿ ಸದಸ್ಯ ಟಿ.ಎಸ್.ಸತ್ಯಾನಂದ, ಮುನಾವರ್‌ಖಾನ್, ಮಹಮ್ಮದ್ ಜಬೀವುಲ್ಲಾ, ಮುಜಾಹಿದ್ ಅಲಿಖಾನ್, ಟಿ.ಕೆ.ರಾಮಲಿಂಗಯ್ಯ, ಪುಷ್ಪಾವತಿ, ಪ್ರಶಾಂತ್‌ಬಾಬು, ಮಹಾಲಿಂಗು, ಎಸ್.ಗುರು, ಸಂಪತ್‌ಕುಮಾರ್, ನಾಗಮಣಿ, ನರಸಮ್ಮ, ನರಸಪ್ಪ ಹೆಗಡೆ, ಶಿವನಂಜು, ಪಾಪಣ್ಣ ಇದ್ದರು.