ಚೆನ್ನೈ: ಮದುವೆಮಾಡಿಸಿಲ್ಲವೆಂದು ಕುಪಿತಗೊಂಡ ಮಗ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನೇ ಜೀವಂತವಾಗಿ ದಹಿಸಿದ ಘಟನೆ ತಮಿಳುನಾಡಿನ ಅರುಂಬಕ್ಕಂನಲ್ಲಿ ಭಾನುವಾರ ನಡೆದಿದೆ.
40 ವರ್ಷದ ಕ್ಯಾಬ್ ಚಾಲಕ ಡಿ ಅಮರನಾಥ್ ಪ್ರಸಾದ್ ತನ್ನ ತಾಯಿ ಡಿ ಶಶಿಕಲಾ(63) ಅವರನ್ನು ಜೀವಂತವಾಗಿ ಸುಟ್ಟು ಹಾಕಿದ್ದಾನೆ.
ತಾಯಿ ತನಗೆ ಮದುವೆ ಮಾಡಿಸಿಲ್ಲವೆಂದು ಕುಪಿತನಾದ ಅಮರನಾಥ್ ಪ್ರಸಾದ್ ಕಂಠ ಪೂರ್ತಿ ಮದ್ಯ ಸೇವಿಸಿ, ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ಎಳೆದು ಕುರ್ಚಿಗೆ ಕಟ್ಟಿ ಹಾಕಿ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಿದ್ದಾನೆ.
ತಂದೆಯ ಸಾವಿನ ನಂತರ ತನಗೆ ಮದುವೆ ಮಾಡಿಸುವಂತೆ ಅಮರನಾಥ್ ತಾಯಿ ಮೇಲೆ ಒತ್ತಡ ಹೇರುತ್ತಿದ್ದನು. ಪ್ರತಿ ನಿತ್ಯ ಕೆಲಸ ಮುಗಿಸಿ ಮನೆಗೆ ಬಂದು ತಾಯಿ ಮೇಲೆ ಜಗಳ ಮಾಡುತ್ತಿದ್ದನು. ನೆರೆ ಮನೆಯವರು ಜಗಳವನ್ನು ಬಿಡಿಸುತ್ತಿದ್ದರು. ತಾಯಿ ಶಶಿಕಲಾ ಕಾಲಿಗೆ ಸಂಬಂಧಿಸಿದಂತ ಕಾಯಿಲೆಯಿಂದ ನರಳುತಿದ್ದು, ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಕುರ್ಚಿಯಲ್ಲಿ ಕುಳಿತಿರುತ್ತಿದ್ದರು.
ಭಾನುವಾರ ಬೆಳಿಗ್ಗೆ ಆಕೆಯನ್ನು ಅದೇ ಕುರ್ಚಿಗೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾನೆ. ತಾಯಿಯ ಕಿರುಚಾಟ ಕೇಳಿ ನೆರೆ ಮನೆಯವರು ಆಗಮಿಸಿ ಆಕೆಯನ್ನು ಕಿಪೌಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಮಗನನ್ನು ಬಂಧಿಸಿದ್ದಾರೆ.