ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬಾವೂರ್ ಎಂಬಲ್ಲಿ ಕಾನೂನು ವಿದ್ಯಾರ್ಥಿಯೊಬ್ಬಳನ್ನು ಪೈಶಾಚಿಕ ರೀತಿಯಲ್ಲಿ ಅತ್ಯಾಚಾರವೆಸಗಿ ಹತ್ಯೆಗೈದ ಘಟನೆ ವರದಿಯಾಗಿದೆ.
30ರ ಹರೆಯದ ದಲಿತ ಯುವತಿ ಜಿಶಾ ಎಂಬಾಕೆ ಅತ್ಯಾಚಾರಕ್ಕೊಳಗಾಗಿದ್ದು, ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣಕ್ಕಿಂತ ಅಮಾನುಷವಾಗಿ ಈಕೆಯನ್ನು ಪೀಡಿಸಲಾಗಿದೆ.
ಕಳೆದ ಗುರುವಾರ ಏಪ್ರಿಲ್ 28 ಕ್ಕೆ ಎರ್ನಾಕುಳಂ ಕಾನೂನು ಕಾಲೇಜಿನ ವಿದ್ಯಾರ್ಥಿನಿಯಾದ ಜಿಶಾಳ ಮೃತದೇಹ ಆಕೆಯ ಮನೆಯಲ್ಲಿ ಪತ್ತೆಯಾಗಿತ್ತು. ದಿನಗೂಲಿ ಕೆಲಸ ಮಾಡುತ್ತಿದ್ದ ಜಿಶಾಳ ಅಮ್ಮ ರಾತ್ರಿ 8.30ಕ್ಕೆ ಮನೆಗೆ ವಾಪಸ್ ಬಂದಾಗ ಜಿಶಾ ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು.
ಜಿಶಾಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಆಕೆಯ ದೇಹದೊಳಗೆ ಹರಿತವಾದ ಕಬ್ಬಿಣದ ರಾಡ್ ಒಂದನ್ನು ತೂರಲಾಗಿದ್ದು, ಇದರಿಂದ ಆಕೆಯ ಕರುಳು ಛಿದ್ರವಾಗಿದೆ. ತಲೆಯನ್ನು ಭಾರವಾದ ವಸ್ತುವಿನಿಂದ ಜಜ್ಜಲಾಗಿದೆ. ಆಕೆಯ ದೇಹದಲ್ಲಿ 30 ಗಾಯಗಳಾಗಿದ್ದುಸ ಎದೆ ಭಾಗದಲ್ಲಿ ಇರಿದ ಆಳವಾದ ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ.
ಇದು ಅತೀ ಕ್ರೂರವಾದ ಕೃತ್ಯ. ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈಯ್ಯಲಾಗಿತ್ತು. ಈ ಪ್ರರಕಣದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಎರ್ನಾಕುಲಂ ಐಜಿ ಮಹಿಪಾಲ್ ಯಾದವ್ ಹೇಳಿದ್ದಾರೆ.
ಜಿಶಾ ಹತ್ಯೆ ನಡೆದು ಇಂದಿಗೆ ಐದು ದಿನಗಳಾದರೂ ಈ ಪ್ರಕರಣದಲ್ಲಿ ಯಾರೊಬ್ಬರನ್ನೂ ಬಂಧಿಸಲಾಗಿಲ್ಲ.