ರಾಂಚಿ: 1947ರಲ್ಲಿ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಜಾರ್ಖಂಡ್ ಲತೇಹಾರ್ ಜಿಲ್ಲೆಯ ಲಾಲ್‍ಘಡಿ ಗ್ರಾಮದಲ್ಲಿ ಒಂದು ಪೊಲೀಸ್ ಕೇಸ್ ಕೂಡ ದಾಖಲಾಗಿರಲಿಲ್ಲ. ಆದರೆ ಇದೀಗ ಈ ಗ್ರಾಮದ ಪ್ರಕರಣವೊಂದು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.
ಇಲ್ಲಿನ ಬುಡಕಟ್ಟು ಜನಾಂಗದ ವಿವಾಹಿತ ವ್ಯಕ್ತಿಯೊಬ್ಬ ಇದೇ ಗ್ರಾಮದ ಮಹಿಳೆಯೊಂದಿಗೆ ನಾಪತ್ತೆಯಾಗಿರುವ ಪ್ರಕರಣ ಭಾನುವಾರ ಗ್ರಾಮಸ್ಥರನ್ನು ಪೊಲೀಸ್ ಠಾಣೆಗೆ ಹೋಗಲೇಬೇಕಾದ ಪರಿಸ್ಥಿತಿಗೆ ತಂದೊಡ್ಡಿದೆ.
ಒಂದು ಸಾವಿರ ಜನ ನಿವಾಸಿಗಳಿರುವ ಲಾಲ್‍ಘಡಿ ಗ್ರಾಮದಲ್ಲಿ ಇಲ್ಲಿಯವರೆಗೂ ಯಾವುದೇ ಜಗಳ ಅಥವಾ ವಿವಾದಗಳು ನಡೆದರೂ ಗ್ರಾಮದ ಮುಖ್ಯಸ್ಥರು ಪಂಚಾಯತ್ ಸೇರಿ ಇತ್ಯರ್ಥ ಮಾಡುತ್ತಿದ್ದರು. ಆದ್ದರಿಂದ ಗ್ರಾಮಸ್ಥರು 1947ರಿಂದ ಇಲ್ಲಿಯವರೆಗೂ ಪೊಲೀಸ್ ಠಾಣೆಗೆ ಹೋಗಿ ಯಾವುದೇ ದೂರನ್ನು ದಾಖಲಿಸಿರಲಿಲ್ಲ.
ಅಪರಾಧ ಕೃತ್ಯಗಳೇ ಇಲ್ಲದ ಗ್ರಾಮ ಎಂದು ಹೆಸರುವಾಸಿಯಾಗಿರುವ ಲಾಲ್‍ಘಡಿ ಗ್ರಾಮದ ಹೆಸರಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಪ್ರಕರಣವನ್ನು ದಾಖಲಿಸಿಕೊಳ್ಳುವ ಮುನ್ನ ಎರಡೂ ಕಡೆಯವರಿಗೆ ಮಾತುಕತೆ ನಡೆಸಿ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಇಲ್ಲಿನ ಪೊಲೀಸ್ ಠಾಣೆಯ ಅಧಿಕಾರಿ ರಮೇಶ್ ಪ್ರಸಾದ್ ಸಿಂಗ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಜಾರ್ಖಂಡ್ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ವಿಜಯೇಂದರ್ ಸಿಂಗ್ ಕೂಡ ಲಾತೇಹಾರ್ ಜಿಲ್ಲೆಗೆ ಈ ಹಿಂದೆ ಭೇಟಿ ನೀಡಿದಾಗ ಲಾಲ್‍ಘಡಿ ಗ್ರಾಮವನ್ನು ಹಾಡಿಹೊಗಳಿದ್ದರು. ಆದ್ದರಿಂದ ಗ್ರಾಮಸ್ಥರಿಗೆ ತಾವೇ ಚರ್ಚಿಸಿ ವಿವಾದವನ್ನು ಇತ್ಯರ್ಥ ಮಾಡುವ ಅವಕಾಶ ನೀಡಲಾಗಿದ್ದು ಒಂದು ವೇಳೆ ಪ್ರಕರಣ ಇತ್ಯರ್ಥವಾಗದಿದ್ದರೆ ಮಾತ್ರ ಮಧ್ಯಸ್ತಿಕೆ ವಹಿಸುವುದಾಗಿ ಸಿಂಗ್ ಹೇಳಿದ್ದಾರೆ.