ನವದೆಹಲಿ: ಏಳನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರುವ ಮುನ್ನವೇ ಸಂಸದರ ವೇತನವನ್ನು ಶೇ. 100 ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾತ್ವಿಕ ಸಹಮತ ಇಲ್ಲ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ನೇತೃತ್ವದ ಸಂಸದರ ವೇತನ ಮತ್ತು ಸವಲತ್ತುಗಳ ಜಂಟಿ ಸಲಹಾ ಸಮಿತಿ ಸಂಸತ್ ಸದಸ್ಯರಿಗೆ ಶೇ. 100ರಷ್ಟು ವೇತನ ಹೆಚ್ಚಳ ಶಿಫಾರಸು ಮಾಡಿತ್ತು. ಸಮಿತಿಯು ಸಂಸದರ ಮಾಸಿಕ ವೇತನವನ್ನು 50 ಸಾವಿರರಿಂದ 1 ಲಕ್ಷ ರೂ. ಗಳ ವರೆಗೆ, ಕ್ಷೇತ್ರ ಭತ್ಯೆಯನ್ನು 45ರಿಂದ 90 ಸಾವಿರ ರೂ.ಗಳ ವರೆಗೆ ಏರಿಸಬಹುದು ಎಂಬಿತ್ಯಾದಿ 60ಕ್ಕೂ ಹೆಚ್ಚು ಬೇಡಿಕೆಗಳನ್ನು ಸಲ್ಲಿಸಿತ್ತು. ಈ ಪ್ರಸ್ತಾಪಗಳು ಪೂರ್ತಿಯಾಗಿ ಅಂಗೀಕಾರವಾದಲ್ಲಿ ಸಂಸದರಿಗೆ ನೀಡಲಾಗುವ ವೇತನ ಭತ್ಯೆಗಳ ಮೊತ್ತ 1,40,000 ರೂಪಾಯಿಗಳಿಂದ 2,80,00 ರೂಪಾಯಿಗಳಿಗೆ ಏರಿಕೆಯಾಗುತ್ತದೆ. ‘ಉತ್ತಮ ಸಾಧನೆ’ ಸಲುವಾಗಿ ಸಂಸದರ ವೇತನ, ಭತ್ಯೆಗಳನ್ನು ಶೇಕಡಾ 100ರಷ್ಟು ಹೆಚ್ಚಿಸಬಹುದು ಎಂದು ಸಮಿತಿ ಹೇಳಿತ್ತು. ಆದರೆ ಸಂಸದೀಯ ವ್ಯವಹಾರಗಳ ಸಚಿವಾಲಯವು ಇವುಗಳ ಪೈಕಿ ಶೇ. 75ರಷ್ಟನ್ನು ನಿರಾಕರಿಸಿದೆ ಎಂದು ಮೂಲಗಳು ಹೇಳಿವೆ.
ಸಮಿತಿಯ ಶಿಫಾರಸುಗಳು ಪ್ರಸ್ತುತ ಪ್ರಧಾನ ಮಂತ್ರಿಗಳ ಕಚೇರಿಯ (ಪಿಎಂಒ) ಮುಂದಿದ್ದು, ಕಚೇರಿಯು ತನ್ನ ಅಂತಿಮ ಅಭಿಪ್ರಾಯವನ್ನು ನೀಡಿಲ್ಲ.
ಪ್ರತಿಬಾರಿ ಸಂಸದರ ವೇತನ ಹೆಚ್ಚಳಕ್ಕೆ ಮಸೂದೆ ಮಂಡಿಸುವ ಬದಲು ನಿರ್ದಿಷ್ಟ ವ್ಯವಸ್ಥೆಯೊಂದನ್ನು ರೂಪಿಸಬಹುದು. ಸಾರಾಸಗಟಾಗಿ ಎಲ್ಲ ಸಂಸದರ ವೇತನ ಶೇ. 100 ಹೆಚ್ಚಳ ಸರಿಯಲ್ಲ ಎಂಬುದು ಪ್ರಧಾನಿಯವರ ಮೋದಿ ನಿಲುವು ಎಂದು ಮೂಲಗಳು ಹೇಳಿವೆ.
5 ರಾಜ್ಯಗಳ ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿ ಇರುವ ಸಂದರ್ಭ ಸಂಸದರ ವೇತನ ಪರಿಷ್ಕರಣೆ ಪ್ರಕ್ರಿಯೆ ಎಡಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಲಿರುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ.