ನವದೆಹಲಿ: ನಟ ಹೃತಿಕ್ ರೋಷನ್ ಜೊತೆಗಿನ ಪ್ರೇಮ ಪ್ರಕರಣ ಮತ್ತು ಕೋರ್ಟ್ ವಿವಾದದಿಂದಾಗಿ ಸುದ್ದಿಯಲ್ಲಿರುವ ನಟಿ ಕಂಗನಾ ರಾನೌತ್ ತಮ್ಮ ವಿವಾದಗಳಿಗೆ ಸಂಬಂಧಿಸಿದಂತೆ ನನ್ನನ್ನು ವೇಶ್ಯೆ ಎಂದು ಕರೆದರೂ ನಾನು ಚಿಂತಿಸುವುದಿಲ್ಲ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕಂಗನಾ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಬಾಲಿವುಡ್ ನಟಿ ಕಂಗನಾ ರನೌತ್. “ಮಹಿಳೆಯೊಬ್ಬಳು ಲೈಂಗಿಕವಾಗಿ ಸಕ್ರಿಯಳಾಗಿದ್ದರೆ ಆಕೆಯನ್ನು ವೇಶ್ಯೆ ಎಂದು ಕರೆಯಲಾಗುತ್ತದೆ, ಆಕೆ ವೃತ್ತಿ ಜೀವನದಲ್ಲಿ ಭಾರೀ ಯಶಸ್ಸು ಸಾಧಿಸುತ್ತಿದ್ದರೆ ಆಕೆಯನ್ನು ಸೈಕೋಪಾತ್ (ಮನೋರೋಗಿ) ಎಂದು ಕರೆಯುತ್ತಾರೆ. ಹೀಗಾಗಿ ನನ್ನನ್ನು ವೇಶ್ಯೆ ಎಂದಾಗಲೀ ಅಥವಾ ಸೈಕೋಪಾತ್ ಎಂದಾಗಲೀ ಕರೆದರೂ ನನ್ನದೇನೂ ಅಭ್ಯಂತರವಿಲ್ಲ’ ಎಂದು ಕಂಗನಾ ವ್ಯಂಗ್ಯವಾಗಿ ತಮ್ಮ ಎದುರಾಳಿಗಳಿಗೆ ಟಾಂಗ್ ನೀಡಿದ್ದಾರೆ.
“ಹಳ್ಳಿಯಿಂದ ಆರಂಭವಾದ ನನ್ನ ಜೀವನ ಇಲ್ಲಿಯವರೆಗೂ ಅದ್ಭುತವಾಗಿದೆ. ನನ್ನ ವೃತ್ತಿ ಜೀವನದಲ್ಲೂ ಸಾಕಷ್ಟು ಏರಿಳಿತಗಳನ್ನು ನೋಡಿದ್ದೇನೆ. ಆದರೆ ಪ್ರಸ್ತುತ ನಾನು ಸರಿಯಾದ ಹಾದಿಯಲ್ಲೇ ಸಾಗುತ್ತಿದ್ದೇನೆ ಎಂದು ನಂಬಿದ್ದೇನೆ. ಅದರಲ್ಲೇ ತೃಪ್ತಿ ಕೂಡ ಪಡುತ್ತಿದ್ದೇನೆ. ನಾನು ನಾನಾಗಿಯೇ ಇರಲು ಬಯಸುತ್ತೇನೆಯೇ ಹೊರತು, ಬೇರೆಯವಳಾಗಿ ಅಲ್ಲ ಎಂದು ಕಂಗನಾ ಹೇಳಿದ್ದಾರೆ.
ಅಂತೆಯೇ ತಮ್ಮ ಮಾತನ್ನು ಮುಂದುವರೆಸುತ್ತಾ “ಈಗಲೂ ಮಹಿಳೆಯನ್ನು ಇಲ್ಲಿ ಒಂದು ವಸ್ತುವಿನ ರೀತಿಯಲ್ಲೇ ನೋಡಲಾಗುತ್ತಿದೆ ಎಂಬ ವಿಚಾರ ಅಚ್ಚರಿ ಹುಟ್ಟಿಸುತ್ತದೆ. ಈ ಹಿಂದೆ ನನಗೆ ಮುಜುಗರ ಉಂಟು ಮಾಡುವ ಎಲ್ಲಾ ಯತ್ನಗಳನ್ನೂ ಮಾಡಲಾಯಿತು. ಆದರೆ ನನ್ನ ಯಶಸ್ಸೇ, ನನ್ನ ಕುರಿತಾದ ಎಲ್ಲಾ ವಿವಾದಗಳಿಗೂ ಸಿಹಿಯಾದ ಪ್ರತಿಕ್ರಿಯೆ ಎಂದು ಭಾವಿಸಿದ್ದೇನೆ. ಎಲ್ಲರ ಜೀವನದಲ್ಲೂ ಕೆಲವು ಕೆಟ್ಟ ದಿನಗಳು ಇದ್ದೇ ಇರುತ್ತೇವೆ, ಆದರ ಆ ಕೆಟ್ಟ ದಿನಗಳ ಬಳಿಕ ಒಳ್ಳೆಯ ದಿನಗಳೂ ಬಂದೇ ಬರುತ್ತವೆ’ ಎಂದು ಕಂಗನಾ ಹೇಳಿದ್ದಾರೆ.