ಚೆನ್ನೈ: ಅಂತರ್ಜಾಲದಲ್ಲಿ ಈಗಾಗಲೇ ಹಿಟ್ ಆಗಿರುವ ಸೂಪರ್ ಸ್ಟಾರ್ ರಜನೀಕಾಂತ್ ಅವರ ನೂತನ ಚಿತ್ರ ಕಬಾಲಿ ಟೀಸರ್ ರಾಜಕೀಯ ರಂಗದಲ್ಲೂ ಸುದ್ದಿಯಾಗುತ್ತಿದೆ.
ಟೀಸರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಮಿಲಿಯನ್ ಹಿಟ್ ಗಳಿಸಿರುವ ಕಬಾಲಿ ಟೀಸರ್‌ನ ‘ವ್ಯಂಗ್ಯ’ ವೀಡಿಯೋವೊಂದು ಕೆಲವು ದಿನಗಳ ಹಿಂದೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.
ಈ ವ್ಯಂಗ್ಯ ವೀಡಿಯೋದಲ್ಲಿ ತಮಿಳ್ನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನೇತೃತ್ವದ ಎಐಎಡಿಎಂಕೆಯನ್ನು ಟಾರ್ಗೆಟ್ ಮಾಡಲಾಗಿತ್ತು.
ಈ ವ್ಯಂಗ್ಯ ವೀಡಿಯೋದಲ್ಲಿ ಎಐಎಡಿಎಂಕೆಯನ್ನು ವಿಲನ್ ಪಾತ್ರದಲ್ಲಿ ತೋರಿಸಿ, ಯಾರು ಡಿಎಂಕೆ? ಎಂಬ ಪ್ರಶ್ನೆ ಕೇಳಲಾಗುತ್ತದೆ. ಈ ವೀಡಿಯೋದಲ್ಲಿ ರಜನಿಕಾಂತ್ ಜಯಲಲಿತಾ ಸರ್ಕಾರ ಚೆನ್ನೈಪ್ರವಾಹದ ವೇಳೆ ತೆಗೆದುಕೊಂಡ ಕ್ರಮಗಳನ್ನು ಟೀಕಿಸುವ ಡೈಲಾಗ್‌ಗಳಿವೆ. ಇಷ್ಟೇ ಅಲ್ಲದೆ ರಜನಿಕಾಂತ್ ಡಿಎಂಕೆ ನಾಯಕರಾದ ಕರುಣಾನಿಧಿ ಮತ್ತು ಎಂಕೆ ಸ್ಟಾಲಿನ್ ಅವರೊಂದಿಗಿರುವ ಹಳೇ ಚಿತ್ರವನ್ನೂ ತೋರಿಸಲಾಗಿದೆ.
ಈ ವ್ಯಂಗ್ಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ರಾಜಕೀಯ ಬಿಸಿಯಿಂದಾಗಿ ವಿಡಿಯೋವನ್ನು ಬ್ಲಾಕ್ ಮಾಡಲಾಯಿತು. ಆದಾಗ್ಯೂ, ಈ ಬಗ್ಗೆ ಡಿಎಂಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.