ಹೈದರಾಬಾದ್ : ತನಗೆ ವಿಚ್ಛೇದನ ನೀಡದೆ ಐಎಎಸ್ ಅಧಿಕಾರಿಯನ್ನು ಮದುವೆಯಾದ ಪತಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ತೆಲುಗು ನಟಿಯೊಬ್ಬರು ಹೈದರಾಬಾದ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ತಾನು ಮತ್ತು ಪತಿ ಪಿ. ವಿಜಯ್ ಗೋಪಾಲ್ 1994ರಲ್ಲಿ ಮದುವೆಯಾಗಿದ್ದು ನಮಗೆ 14 ವರ್ಷದ ಮಗನಿದ್ದಾನೆ ಎಂದು ನಟಿ ಪುಡೊತಾ ಪೂಜಿತಾ ದೂರಿನಲ್ಲಿ ತಿಳಿಸಿದ್ದಾರೆ.ವಿಜಯ್ ಗೋಪಾಲ್ ಹಲವರ ಬಳಿ ಸಾಲ ಪಡೆದುಕೊಂಡು ಸ್ವಲ್ಪ ಸಮಯ ಕಳೆದ ನಂತರ ಚೆಕ್ ನೀಡುತ್ತಿದ್ದ. ಚೆಕ್ ಬೌನ್ಸ್ ಆಗಿ ವಿಜಯ್ ಗೋಪಾಲ್ ಮನೆಗೆ ಸಾಲ ಹಿಂತಿರುಗಿಸುವಂತೆ ಕೇಳಲು ಬಂದಾಗ ತಲೆಮರೆಸಿಕೊಳ್ಳುತ್ತಿದ್ದ. ತನ್ನ ಚಿನ್ನಾಭರಣಗಳನ್ನು ಕೂಡ ಕದ್ದು ತಲೆಮರೆಸಿಕೊಂಡಿದ್ದ ಎಂದು ಪೂಜಿತಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಕಳೆದ ತಿಂಗಳು ವಿಜಯ್ ಗೋಪಾಲ್ ಜಿ.ರೇಖಾ ರಾಣಿ ಎಂಬ ಐಎಎಸ್ ಅಧಿಕಾರಿಯನ್ನು ಅಂಜನಾ ಸಿನ್ಹಾ ಎಂಬ ಐಪಿಎಸ್ ಅಧಿಕಾರಿಯ ಅಧಿಕೃತ ನಿವಾಸದಲ್ಲಿ ಮದುವೆಯಾಗಿದ್ದಾರೆ ಎಂದು ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ದಾಖಲಾಗಿದೆ. ತಮ್ಮ ಪತಿ ಮದುವೆಯಾಗುವವರೆಗೂ ತನ್ನ ಬಳಿ ವಿಚ್ಛೇದನ ಪಡೆದಿರಲಿಲ್ಲ ಮತ್ತು ಈ ವಿಷಯ ರೇಖಾ ರಾಣಿ, ಅವರ ಮನೆಯವರಿಗೆ ಹಾಗೂ ಅಂಜನಾ ಸಿನ್ಹಾ ಅವರಿಗೂ ಗೊತ್ತಿದೆ. ಹಾಗಾಗಿ ಪ್ರಕರಣ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆಯೂ ಪೂಜಿತಾ ದೂರಿನಲ್ಲಿ ಒತ್ತಾಯಿಸಿದ್ದಾರೆ.