ಬೆಂಗಳೂರು: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದೆದುರು ವಿರಾಟ್ ಕೊಹ್ಲಿ ಪಡೆಯ ಸ್ಟಾರ್ ಗಳು ಮಂಕಾಗಿದ್ದರಿಂದ 6 ವಿಕೆಟ್ಗಳ ಸೋಲು ಎದುರಾಯಿತು. ಇದರಿಂದ ಆರ್ಸಿಬಿ ತಂಡ ಪ್ಲೇ-ಆಫ್ ರೇಸ್ನಲ್ಲಿ ಮಾಡು ಇಲ್ಲವೆ ಮಡಿ ಒತ್ತಡಕ್ಕೆ ಸಿಲುಕಿದ್ದರೆ, ರೋಹಿತ್ ಪಡೆ 11ನೇ ಪಂದ್ಯದಲ್ಲಿ ಕಂಡ 6ನೇ ಜಯದಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
‘ಪ್ಲೇ ಆಫ್’ ಆಸೆಯನ್ನು ಜೀವಂತವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಬೆಂಗ ಳೂರಿನ ತಂಡ ಮುಗ್ಗರಿಸಿತು. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗಳಿಂದ ಗೆಲುವು ಗಳಿಸಿ ಸಂಭ್ರಮಿಸಿತು. ಇದರೊಂದಿಗೆ ರೋಹಿತ್ ಶರ್ಮಾ ಬಳಗದ ‘ಪ್ಲೇ ಆಫ್’ಕನಸಿಗೆ ಜೀವ ಬಂತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ, ಕೆ.ಎಲ್. ರಾಹುಲ್ (ಔಟಾಗದೆ 68; 53ಎ, 3ಬೌಂ, 4 ಸಿ) ಅವರ ಆಕರ್ಷಕ ಅರ್ಧಶತಕದಿಂದಾಗಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 151ರನ್ ಪೇರಿಸಿತು. ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸ್ವರ್ಗ ಎನಿಸಿದ್ದ ಮೈದಾನದಲ್ಲಿ ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದಾಗಲೇ ಮುಂಬೈ ಗೆಲುವು ನಿಶ್ಚಿತವಾಗಿತ್ತು. ಅಭಿಮಾನಿಗಳ ಈ ನಿರೀಕ್ಷೆ ಹುಸಿಯಾಗಲಿಲ್ಲ. ರೋಹಿತ್ ಪಡೆ 18.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಆಘಾತ ನೀಡಿದ ಅರವಿಂದ್: ಗುರಿ ಬೆನ್ನಟ್ಟಿದ ಮುಂಬೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಿದ ಪಾರ್ಥಿವ್ ಪಟೇಲ್, ಒಂದು ರನ್ ಗಳಿಸಿ ಎಸ್. ಅರವಿಂದ್‌ಗೆ ವಿಕೆಟ್ ಒಪ್ಪಿಸಿದರು.
ಆ ಬಳಿಕ ರೋಹಿತ್ (25; 24ಎ, 3ಬೌಂ) ಮತ್ತು ಅಂಬಟಿ ರಾಯುಡು (44; 47ಎ, 2ಬೌಂ, 2ಸಿ) ಅಮೋಘ ಜತೆಯಾಟ ಆಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 41ಎಸೆತಗಳಲ್ಲಿ 50ರನ್ ಗಳಿಸಿದ್ದಾಗಲೇ ಆರ್‌ಸಿಬಿ ತಂಡ ಗೆಲುವಿನ ಆಸೆ ಕೈಬಿಟ್ಟಿತ್ತು. ಇವರಿಬ್ಬರ ವಿಕೆಟ್ ಉರುಳಿಸಿದ ವರುಣ್ ಆ್ಯರನ್ ಆತಿಥೇಯ ಆಟಗಾರರ ಮೊಗದಲ್ಲಿ ಸಂತಸದ ಅಲೆ ಉಕ್ಕುವಂತೆ ಮಾಡಿ ದರು. ಆ ಬಳಿಕ ನಿತಿಶ್ ರಾಣಾ (9) ಕೂಡಾ ಬೇಗನೆ ಔಟಾದರು. ಹೀಗಾಗಿ ಕೊಹ್ಲಿ ಪಡೆ ಗೆಲುವಿನ ಕನಸು ಕಂಡಿತ್ತು.
ಸುಂದರ ಜತೆಯಾಟ: ಈ ಹಂತದಲ್ಲಿ ಒಂದಾದ ಕೀರನ್ ಪೊಲಾರ್ಡ್ (ಔಟಾಗದೆ 35; 19ಎ, 3ಬೌಂ, 2ಸಿ) ಮತ್ತು ಜಾಸ್ ಬಟ್ಲರ್ (ಔಟಾಗದೆ 29; 11ಎ, 1ಬೌಂ, 3ಸಿ) ಮುರಿಯದ ಐದನೇ ವಿಕೆಟ್ ಜತೆಯಾಟದಲ್ಲಿ 22 ಎಸೆತಗಳಲ್ಲಿ 55ರನ್ ಪೇರಿಸಿ ಬೆಂಗಳೂರಿನ ತಂಡದ ಜಯದ ಕನಸನ್ನು ಚಿವುಟಿ ಹಾಕಿದರು. ಅಬ್ಬರಿಸದ ಕೊಹ್ಲಿ ಬ್ಯಾಟಿಂಗ್ ಆರಂಭಿಸಿದ ಆತಿಥೇಯ ರಿಗೆ ಎರಡನೇ ಓವರ್‌ನ ಮೊದಲ ಎಸೆತದಲ್ಲಿಯೇ ಆಘಾತ ಎದುರಾಯಿತು.
ನಾಯಕ ವಿರಾಟ್ ಕೊಹ್ಲಿ 7ರನ್ ಗಳಿಸಿ ಮಿಷೆಲ್ ಮೆಕ್‌ಲೆನಾಗನ್‌ಗೆ ವಿಕೆಟ್ ಒಪ್ಪಿಸಿದರು.ಇದು ಈ ಬಾರಿಯ ಟೂರ್ನಿಯಲ್ಲಿ ಕೊಹ್ಲಿ ಗಳಿಸಿದ ಅತೀ ಕಡಿಮೆ ಮೊತ್ತ ಎನಿಸಿತು. ತವರಿನ ಅಂಗಳದಲ್ಲಿ ಹೋದ ಶನಿವಾರ ನಡೆದಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ ಶತಕ ಗಳಿಸಿ ತಂಡಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದ ಕೊಹ್ಲಿ ವೇಗವಾಗಿ ರನ್ ಗಳಿಸುವ ಭರದಲ್ಲಿ ಕೈಸುಟ್ಟುಕೊಂಡರು.
ಮೆಕ್‌ಲೆನಾಗನ್ ಹಾಕಿದ ಚೆಂಡನ್ನು ವಿರಾಟ್ ಕಟ್ ಮಾಡಲು ಮುಂದಾ ದರು. ಅವರ ಬ್ಯಾಟ್‌ನ ಅಂಚಿಗೆ ಸವರಿ ವೇಗವಾಗಿ ತಮ್ಮತ್ತ ಬಂದ ಚೆಂಡನ್ನು ಮೊದಲ ಸ್ಲಿಪ್‌ನಲ್ಲಿದ್ದ ಹರಭಜನ್ ಸಿಂಗ್ ಹಿಡಿತಕ್ಕೆ ಪಡೆಯುತ್ತಿದ್ದಂತೆ ಕ್ರೀಡಾಂಗಣ ದಲ್ಲಿ ನೀರವ ಮೌನ ಆವರಿಸಿತು. ಕೊಹ್ಲಿ ಅವರ ಬ್ಯಾಟಿಂಗ್ ಸೊಬ ಗನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಉದ್ಯಾನನಗರಿಯ ಕ್ರಿಕೆಟ್ ಪ್ರಿಯರು ತಲೆಯ ಮೇಲೆ ಕೈ ಹೊತ್ತು ಕುಳಿತರು.
ನಡೆಯದ ಗೇಲ್ ಆಟ: ಕೊಹ್ಲಿ ಔಟಾದರೂ ಕೂಡಾ ಕ್ರೀಸ್‌ನಲ್ಲಿ ಕ್ರಿಸ್ ಗೇಲ್ ಇದ್ದ ಕಾರಣ ಮೈದಾನದಲ್ಲಿರನ್ ಮಳೆ ಸುರಿಯ ಬಹುದೆಂಬ ನಿರೀಕ್ಷೆ ಅಭಿಮಾನಿಗಳ ದ್ದಾಗಿತ್ತು. ಆದರೆ ವೆಸ್ಟ್ ಇಂಡೀಸ್‌ನ ಎಡಗೈ ಬ್ಯಾಟ್ಸ್‌ಮನ್ ಗೇಲ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಟ್ರಾವಿಸ್ ಹೆಡ್ ಬದಲು ತಂಡದಲ್ಲಿ ಸ್ಥಾನ ಗಳಿಸಿದ್ದ ಗೇಲ್, ಟಿಮ್ ಸೌಥಿ ಬೌಲ್ ಮಾಡಿದ ಇನಿಂಗ್ಸ್‌ನ ನಾಲ್ಕನೇ ಓವರ್‌ನ ಮೂರನೇ ಎಸೆತವನ್ನು ಕವರ್ ಪಾಯಿಂಟ್‌ನತ್ತ ಬೌಂಡರಿ ಬಾರಿಸಿ ಲಯ ಕಂಡುಕೊಳ್ಳುವ ಸೂಚನೆ ನೀಡಿದ್ದರು, ಆದರೆ ಮರು ಎಸೆತದಲ್ಲಿ ಮಿಡ್‌ಆಫ್‌ನಲ್ಲಿದ್ದ ರೋಹಿತ್‌ಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು.
ಜುಗಲ್ ಬಂದಿ14ರನ್ ಆಗುವಷ್ಟರಲ್ಲಿ ಪ್ರಮುಖ ಇಬ್ಬರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರಿಂದ ಆರ್‌ಸಿಬಿ ಪಾಳಯದಲ್ಲಿ ಆತಂಕದ ಛಾಯೆ ಮನೆ ಮಾಡಿತ್ತು. ಆದರೆ ಕರ್ನಾಟಕದ ಕೆ.ಎಲ್. ರಾಹುಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಸೊಬಗಿನ ಇನಿಂಗ್ಸ್ ಕಟ್ಟಿ ತವರಿನ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು. ಆರಂಭದಲ್ಲಿ ಈ ಜೋಡಿ ಒಂದೊಂದೆ ರನ್ ಕಲೆಹಾಕಿ ವಿಕೆಟ್ ಬೀಳದಂತೆ ಎಚ್ಚರ ವಹಿಸಿತು.
ಹೀಗಾಗಿ ಬೆಂಗಳೂರಿನ ತಂಡ ಮೊದಲ ಹತ್ತು ಓವರ್‌ಗಳು ಮುಗಿದಾಗ ಎರಡು ವಿಕೆಟ್‌ಗೆ 60ರನ್‌ಗಳನ್ನು ಕಲೆಹಾಕಿತ್ತು. ಆ ಬಳಿಕ ಡಿವಿಲಿಯರ್ಸ್ ವೇಗದ ಆಟಕ್ಕೆ ಮನಸ್ಸು ಮಾಡಿದರು. ಹರಭಜನ್ ಸಿಂಗ್‌್ ಬೌಲ್ ಮಾಡಿದ 10ನೇ ಓವರ್‌ನ ಮೊದಲ ಎಸೆತದಲ್ಲಿ ಡಿವಿಲಿಯರ್ಸ್ ಸಿಕ್ಸರ್ ಬಾರಿಸಿದಾಗ ಅಂಗಳದಲ್ಲಿ ಮೆಕ್ಸಿಕನ್ ಅಲೆ ಎದ್ದಿತು.
ಈ ಜೋಡಿಯನ್ನು ಮುರಿಯಲು ಮುಂಬೈ ತಂಡದ ನಾಯಕ ರೋಹಿತ್ ಬೌಲಿಂಗ್‌ನಲ್ಲಿ ಹಲವು ಬಾರಿ ಬದಲಾವಣೆಗಳನ್ನು ಮಾಡಿದರು. ಅವರು 11ನೇ ಓವರ್ ಬೌಲ್ ಮಾಡಲು ಕೃಣಾಲ್ ಪಾಂಡ್ಯ ಕೈಗೆ ಚೆಂಡು ನೀಡಿದ್ದು ಫಲ ನೀಡಿತು. 26 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಸಹಿತ 24ರನ್ ಗಳಿಸಿ ಆಡುತ್ತಿದ್ದ ಎಬಿಡಿ, ಚೆಂಡನ್ನು ಬೌಂಡರಿಗಟ್ಟಲು ಮನಸ್ಸು ಮಾಡಿದರು.
ನಿರೀಕ್ಷಿಸಿದಕ್ಕಿಂತಲೂ ಅಲ್ಪ ಹೆಚ್ಚೆ ಪುಟಿದ ಚೆಂಡು ಡಿವಿಲಿಯರ್ಸ್ ಅವರ ಬ್ಯಾಟಿನ ಮೇಲಂಚಿಗೆ ತಾಗಿ ಮೇಲಕ್ಕೆ ಚಿಮ್ಮಿತು. ಡೀಪ್ ಮಿಡ್‌ವಿಕೆಟ್‌ನತ್ತ ಫೀಲ್ಡಿಂಗ್ ಮಾಡುತ್ತಿದ್ದ ಅಂಬಟಿ ರಾಯುಡು ಅದನ್ನು ಹಿಡಿತಕ್ಕೆ ಪಡೆಯುತ್ತಿದ್ದಂತೆ ಡಿವಿಲಿಯರ್ಸ್ ನಿರಾಸೆಯ ಮೊಗ ಹೊತ್ತು ಪೆವಿಲಿಯನ್‌ನತ್ತ ಪರೇಡ್ ನಡೆಸಿದರು. ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ (15) ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ರಾಹುಲ್-ಸಚಿನ್ ಜೊತೆಯಾಟ
ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೈ ಕೊಟ್ಟಿದ್ದರಿಂದ ಆರ್‌ಸಿಬಿ ತಂಡ 120ರ ಗಡಿ ದಾಟುವುದೇ ಕಷ್ಟ ಎನಿಸಿತ್ತು. ಆದರೆ ರಾಹುಲ್ ಮತ್ತು ಸಚಿನ್ ಬೇಬಿ ಅವರ ಸೊಗಸಾದ ಜೊತೆಯಾಟದಿಂದ ತಂಡ 150ರ ಗಡಿ ದಾಟಿತು.ಟೂರ್ನಿಯ ಹಿಂದಿನ ಪಂದ್ಯಗಳಲ್ಲಿ ಅಬ್ಬರದ ಆಟ ಆಡಿದ್ದ ರಾಹುಲ್, ತವರಿನ ಅಂಗಳದಲ್ಲಿಯೂ ಮಿಂಚು ಹರಿಸಿದರು.ಮುಂಬೈ ಬೌಲರ್‌ಗಳನ್ನು ಅಕ್ವರಶಃ ಕಾಡಿದ ಅವರು 42 ಎಸೆತಗಳಲ್ಲಿ 50ರನ್ ಗಳಿಸಿ ಸಂಭ್ರಮಿಸಿದರು. ಇದರಲ್ಲಿ ಮೂರು ಬೌಂಡರಿ ಮತ್ತು ಒಂದು ಸೊಗಸಾದ ಸಿಕ್ಸರ್ ಸೇರಿತ್ತು.
ರಾಹುಲ್‌ಗೆ ಸಚಿನ್ ಬೇಬಿ (25; 13ಎ, 2ಬೌಂ, 2 ಸಿ) ಉತ್ತಮ ಬೆಂಬಲ ನೀಡಿದರು. ಈ ಜೋಡಿ ಮುರಿಯದ ಐದನೇ ವಿಕೆಟ್ ಜತೆಯಾಟದಲ್ಲಿ 25 ಎಸೆತಗಳಲ್ಲಿ 50ರನ್ ಬಾರಿಸಿ ಗಮನಸೆಳೆಯಿತು. ಇವರಿಬ್ಬರು ಕೀರನ್ ಪೊಲಾರ್ಡ್ ಎಸೆದ 18ನೇ ಓವರ್‌ನಲ್ಲಿ 22ರನ್ ಕಲೆಹಾಕಿದ್ದು ವಿಶೇಷ.
ಸ್ಕೋರ್‌ಕಾರ್ಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 4ಕ್ಕೆ 151
(20 ಓವರ್‌ಗಳಲ್ಲಿ)
ವಿರಾಟ್ ಕೊಹ್ಲಿ ಸಿ ಹರಭಜನ್ ಸಿಂಗ್ ಬಿ ಮಿಷೆಲ್ ಮೆಕ್‌ಲೆನಾಗನ್ 07
ಕ್ರಿಸ್ ಗೇಲ್ ಸಿ ರೋಹಿತ್ ಶರ್ಮಾ ಬಿ ಟಿಮ್ ಸೌಥಿ 05
ಎಬಿ ಡಿವಿಲಿಯರ್ಸ್ ಸಿ ಅಂಬಟಿ ರಾಯುಡು ಬಿ ಕೃಣಾಲ್ ಪಾಂಡ್ಯ 24
ಕೆ.ಎಲ್. ರಾಹುಲ್ ಔಟಾಗದೆ 68
ಶೇನ್ ವ್ಯಾಟ್ಸನ್ ರನ್‌ಔಟ್ (ರೋಹಿತ್ ಶರ್ಮಾ) 15
ಸಚಿನ್ ಬೇಬಿ ಔಟಾಗದೆ 25
ಇತರೆ: (ಲೆಗ್ ಬೈ 5, ವೈಡ್ 2) 07
ವಿಕೆಟ್ ಪತನ: 1-8 (ಕೊಹ್ಲಿ; 1.1), 2-17 (ಗೇಲ್; 3.4), 3-60 (ಡಿವಿಲಿಯರ್ಸ್; 10.1), 4-98 (ವ್ಯಾಟ್ಸನ್; 15.3).
ಬೌಲಿಂಗ್: ಟಿಮ್ ಸೌಥಿ 4-0-27-1, ಮಿಷೆಲ್ ಮೆಕ್‌ಲೆನಾಗನ್ 4-0-35-1, ಜಸ್‌ಪ್ರೀತ್ ಬೂಮ್ರಾ 4-0-28-0, ಕೃಣಾಲ್ ಪಾಂಡ್ಯ 4-0-15-1, ಹರಭಜನ್ ಸಿಂಗ್3-0-19-0, ಕೀರನ್ ಪೊಲಾರ್ಡ್ 1-0-22-0.
ಮುಂಬೈ ಇಂಡಿಯನ್ಸ್ 4ಕ್ಕೆ 153 (18.4ಓವರ್‌ಗಳಲ್ಲಿ)
ರೋಹಿತ್ ಶರ್ಮಾ ಸಿ ಎಬಿ ಡಿವಿಲಿಯರ್ಸ್ ಬಿ ವರುಣ್ ಆ್ಯರನ್ 25
ಪಾರ್ಥಿವ್ ಪಟೇಲ್ ಸಿ ಶೇನ್ ವ್ಯಾಟ್ಸನ್ ಬಿ ಎಸ್.ಅರವಿಂದ್ 01
ಅಂಬಟಿ ರಾಯುಡು ಸಿ ಡಿವಿಲಿಯರ್ಸ್ ಬಿ ವರುಣ್ ಆ್ಯರನ್ 44
ನಿತೀಶ್ ರಾಣಾ ಸಿ ಸ್ಟುವರ್ಟ್ ಬಿನ್ನಿ ಬಿ ಯಜುವೇಂದ್ರ ಚಾಹಲ್ 09
ಕೀರನ್ ಪೊಲಾರ್ಡ್ ಔಟಾಗದೆ 35
ಜಾಸ್ ಬಟ್ಲರ್ ಔಟಾಗದೆ 29
ಇತರೆ: (ವೈಡ್ 8, ನೋಬಾಲ್ 2) 10
ವಿಕೆಟ್ ಪತನ: 1-2 (ಪಾರ್ಥಿವ್; 1.1), 2-60 (ರೋಹಿತ್; 9.3), 3-79 (ರಾಣಾ; 12.6), 4-98 (ರಾಯುಡು; 15.1).
ಬೌಲಿಂಗ್: ಸ್ಟುವರ್ಟ್ ಬಿನ್ನಿ 1-0-2-0, ಎಸ್.ಅರವಿಂದ್ 4-0-23-1, ಕ್ರಿಸ್ ಜೋರ್ಡಾನ್ 3-0-37-0, ಶೇನ್ ವ್ಯಾಟ್ಸನ್ 3-0-38-0,ಯಜುವೇಂದ್ರ ಚಾಹಲ್ 4-0-16-1,ವರುಣ್ ಆ್ಯರನ್ 3.4-0-37-2.
ಫಲಿತಾಂಶ: ಮುಂಬೈ ಇಂಡಿಯನ್ಸ್ ತಂಡಕ್ಕೆ 6 ವಿಕೆಟ್ ಗೆಲುವು.
ಪಂದ್ಯಶ್ರೇಷ್ಠ: ಕೃಣಾಲ್ ಪಾಂಡ್ಯ