ಇಂದೋರ್: ಒಂದೆಡೆ ಬಿಜೆಪಿ ರಾಮಮಂದಿರ ನಿರ್ಮಾಣವನ್ನು ತಡೆ ಹಿಡಿದಿದ್ದರೆ ಅದರ ಮೈತ್ರಿ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಡಿ. 31ರವರೆಗೆ ಗಡುವು ನೀಡಿದೆ.
`ಡಿ. 31ಕ್ಕೆ ಮುನ್ನವೇ ನಿರ್ಮಾಣ ಆರಂಭಿಸಲಾಗುವುದು. ನಾವು ಸುಪ್ರೀಂಕೋರ್ಟ್ ತೀರ್ಪಿಗೆ ಕಾಯುವುದಿಲ್ಲ. ನಮಗೆ ಕಾದು ಕಾದು ಸಾಕಾಗಿದೆ. ಡಿಸೆಂಬರ್‌ನಿಂದಾಚೆಗೆ ಕಾಯುವುದಿಲ್ಲ’ ಎಂದು ಉಜ್ಜಯಿನಿಯ ಮಹಾಕುಂಭಕ್ಕೆ ದೇಶಾದ್ಯಂತದಿಂದ ಆಗಮಿಸಿದ್ದ ಸಾಧು, ಸನ್ಯಾಸಿಗಳು ಮತ್ತು ಯುವಕರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದರು.
ಅಯೋಧ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಚಾರ ಪಡೆಯುವ ಉದ್ದೇಶದಿಂದ ಕೆಲವು ಸಂಘಟನೆಗಳು ನ. 1 ರಂದು ಮಂದಿರ ನಿರ್ಮಾಣ ಆರಂಭ ಎಂದು ಹೇಳುತ್ತಿರುವುದನ್ನು ಶುದ್ಧಾಂಗ ಸುಳ್ಳು ಎಂದು ರಾಯ್ ತಳ್ಳಿ ಹಾಕಿದರು.
ದೇವಾಲಯ ನಿರ್ಮಾಣದ ಶೇ. 90ರಷ್ಟು ಕೆಲಸಗಳು ಮುಗಿದಿವೆ. ಉಳಿದಿದ್ದನ್ನು ಸಾಧುಗಳ ನೆರವಿನೊಂದಿಗೆ ಪೂರ್ಣಗೊಳಿಸಲಾಗುವುದು ಎಂದವರು ಹೇಳಿದರು.
ಉಜ್ಜಯಿನಿಯಲ್ಲಿ ನಡೆಯುವ ವೈಚಾರಿಕ ಮಹಾಕುಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸಲಿದ್ದು, ಅದಕ್ಕೆ 4 ದಿನ ಮೊದಲು ಚಂಪತ್ ರಾಯ್ ರಾಮಮಂದಿರ ನಿರ್ಮಾಣಕ್ಕೆ ಡಿ. 31ರ ಗಡುವು ನೀಡಿದ್ದಾರೆ.