ನವದೆಹಲಿ: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆ ಗೆಲವು ಸಿಗಲಿ ಎಂದು ಪ್ರಾರ್ಥಿಸಿ ಹಿಂದೂ ಸೇನೆ ಪೂಜೆ ಸಲ್ಲಿಸಿದೆ.
ಅಮೆರಿಕಾ ಚುನಾವಣೆಯಲ್ಲಿ ಸ್ಪರ್ಧಿಸಲು ಭರ್ಜರಿ ತಯಾರಿ ನಡೆಸಿರುವ ಡೋನಾಲ್ಡ್ ಟ್ರಂಪ್ ಅವರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲವು ಸಿಗಲೆಂದು ಪೂಜೆ ಸಲ್ಲಿಸಲಾಗಿದೆ ಎಂದು ಹಿಂದೂ ಸೇನೆ ಕಾರ್ಯಕರ್ತರು ತಿಳಿಸಿದ್ದಾರೆ.
ಬುಧವಾರ ಜಮಖಾನ, ಶಿವ ಮತ್ತು ಹನುಮಾನ್ ಫೋಟೋ ಹಾಗೂ ಪೂಜಾ ಸಾಮಗ್ರಿಗಳೊಂದಿಗೆ ನವದೆಹಲಿಯ ಜಂತರ್ ಮಂತರ್ ಗೆ ಬಂದ ಹಿಂದೂ ಸೇನಾ ಕಾರ್ಯಕರ್ತರು ಪೂಜೆಯನ್ನು ನೆರವೇರಿಸಿ ಡೋನಾಲ್ಡ್ ಟ್ರಂಪ್ ಗೆಲುವಿಗೆ ದೇವರಲ್ಲಿ ಪ್ರಾರ್ಥಿಸಿದರು.
ಇಸ್ಲಾಮಿಕ್ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಟ್ರಂಪ್ ನೀಡಿದ್ದ ಹೇಳಿಕೆಗೆ ಭಾರತದಲ್ಲಿ ಬೆಂಬಲಿಗರು ಹುಟ್ಟಿಕೊಂಡಿದ್ದಾರೆ. ಪ್ರಸ್ತುತ ಇಡೀ ವಿಶ್ವವೇ ಭಯೋತ್ಪಾದನೆಯಿಂದ ನರಳುತ್ತಿದೆ. ಇಸ್ಲಾಮಿಕ್ ಸಂಘಟನೆಗಳು ಬಾಂಬ್ ದಾಳಿಗಳನ್ನು ನಡೆಸುತ್ತಿದೆ. ಇದನ್ನು ತಡೆಗಟ್ಟಲು ಮನುಕುಲದ ಸಂರಕ್ಷಕನಿಂದ ಮಾತ್ರ ಸಾಧ್ಯ. ಟ್ರಂಪ್ ಮನುಕುಲದ ಸಂರಕ್ಷಕರಾಗಿದ್ದು, ಅವರಿಂದಲೇ ಈ ಕಾರ್ಯ ಸಾಧ್ಯ. ಹಾಗಾಗಿ, ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆದ್ದು ಬರಲಿ ಎಂದು ಯಾಗ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಹಿಂದೂ ಸೇನೆ ಕಾರ್ಯಕರ್ತ ವಿಷ್ಣು ಗುಪ್ತಾ ಹೇಳಿದ್ದಾರೆ.