ಪಾಟ್ನಾ: ಚಲಿಸುತ್ತಿದ್ದ ರೈಲಲ್ಲಿ ಲೂಟಿಗೆ ಯತ್ನಿಸಿದ ಅನಾಮಿಕ ದಾಳಿಕೋರರು ತಡೆಯಲೆತಚ್ನಿಸಿದಗ ಆರ್ ಪಿಎಫ್ ಯೋಧನೋರ್ವನನ್ನು ಗುಂಡಿಕ್ಕೆ ಹತ್ಯೆ ಮಾಡಿದ್ದಾರೆ.
ಶುಕ್ರವಾರ ತಡರಾತ್ರಿ ಈ ಧಾರುಣ ಘಟನೆ ನಡೆದಿದ್ದು, ಮುಘಲ್ ಸರಾಯ್-ಬಕ್ಸರ್ ಪ್ಯಾಸೆಂಜರ್ ರೈಲಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ರೈಲನ್ನು ಏರಿದ ಆರು ಮಂದಿ ದಾಳಿಕೋರರು ರೈಲಲ್ಲಿ ಇದ್ದ ಪ್ರಯಾಣಿಕರ ಸುಲಿಗೆಗೆ ಯತ್ನಿಸಿದ್ದು, ಈ ವೇಳೆ ರೈಲಲ್ಲಿ ಇದ್ದ ಇಬ್ಬರು ಆರ್ ಪಿಎಫ್ ಯೋಧರು ದಾಳಿಕೋರರನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಏಕಾಏಕಿ ಗುಂಡಿನ ದಾಳಿ ನಡೆಸಿದ ದಾಳಿಕೋರರು ಓರ್ವ ಯೋಧನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದಾಳಿ ಬಳಿಕೆ ಯೋಧರ ಬಳಿ ಇದ್ದ ಇನ್ಸಾಸ್ ರೈಫಲ್ ಗಳನ್ನು ತೆಗೆದುಕೊಂಡು ದಾಳಿ ಕೋರರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕಾಗಮಿಸಿದ ಹಿರಿಯ ಅಧಿಕಾರಿಗಳು ರಕ್ತಮಡುವಿನಲ್ಲಿ ಬಿದ್ದಿದ್ದ ಇಬ್ಬರೂ ಯೋಧರನ್ನು ಉತ್ತರ ಪ್ರದೇಶದ ವಾರಣಾಸಿಯಲ್ಲಿನ ಆಸ್ಪತ್ರೆಗೆ ದಾಖಲಿಸಿದರಾದರೂ, ಅಷ್ಟು ಹೊತ್ತಿಗಾಗಲೇ ಓರ್ವ ಸಾವನ್ನಪ್ಪಿದ್ದ. ಮೃತ ಯೋಧನನ್ನು ಅಭಿಷೇಕ್ ಸಿಂಗ್ ಎಂದು ಗುರುತಿಸಲಾಗಿದ್ದು, ನಂದಲಾಲ್ ಯಾದವ್ ಎಂಬ ಮತ್ತೋರ್ವ ಯೋಧನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಸ್ತುತ ಗಾಯಾಳು ಯೋಧನ ಸ್ಥಿತಿ ಗಂಭೀರವಾಗಿದ್ದು, 24 ಗಂಟೆಗಲವರೆಗೂ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇನ್ನು ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರೈಲ್ವೆ ಪೊಲೀಸ್ ಅಧೀಕ್ಷಕ ಜಿತೇಂದ್ರ ಮಿಶ್ರಾ ಅವರು, ವೃತ್ತಿಪರ ದಾಳಿಕೋರರು ಈ ದಾಳಿ ನಡೆಸಿರುವ ಶಂಕೆ ಇದ್ದು, ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುವ ಉದ್ದೇಶದಿಂದಲೇ ದಾಳಿ ನಡೆಸಿದ್ದಾರೆ. ಪ್ರಕರದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.