ಅಂತರಾಷ್ಟ್ರೀಯ

ನಾವಿಕರ ಬಿಡುಗಡೆಗಾಗಿ ಪ್ರಧಾನಿ ಮೋದಿಗೆ ಇಟಲಿ ಬ್ಲಾಕ್ ಮೇಲ್?

Pinterest LinkedIn Tumblr

PM Modi And Italy PM Matteo Renzi

ನವದೆಹಲಿ: ಭಾರತೀಯ ಮೀನುಗಾರರ ಹತ್ಯೆ ಪ್ರಕರಣ ಸಂಬಂಧ ಭಾರತದಲ್ಲಿ ಶಿಕ್ಷೆ ಭೀತಿ ಎದುರಿಸುತ್ತಿರುವ ನಾವಿಕರ ಬಿಡುಗಡೆ ಮಾಡುವಂತೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಟಲಿ ಸರ್ಕಾರ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಬಹುಕೋಟಿ ವಿವಿಐಪಿ ಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಹೇಳಿದ್ದಾನೆ.

ಮೀನುಗಾರರ ಹತ್ಯೆ ಪ್ರಕರಣದಲ್ಲಿ ಸಿಲುಕಿರುವ ತನ್ನ ದೇಶದ ಇಬ್ಬರು ನೌಕಾ ಸಿಬ್ಬಂದಿಯನ್ನು ಭಾರತ ಬಿಡುಗಡೆ ಮಾಡದೇ ಹೋದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಮಟ್ಟೆವೋ ರೆಂಝಿ ಅವರ ನಡುವಿನ ಖಾಸಗಿ ಮಾತುಕತೆಯನ್ನು ಇಟಲಿ ಸರ್ಕಾರ ಬಹಿರಂಗಪಡಿಸಲಿದೆ ಎಂದು ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಒಪ್ಪಂದ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕೆಲ್‌ ಸ್ಫೋಟಕ ಹೇಳಿಕೆ ನೀಡಿದ್ದಾನೆ.

ಪ್ರಸ್ತುತ ಅಬುಧಾಬಿಯಲ್ಲಿರುವ ಕ್ರಿಶ್ಚಿಯನ್ ಮೈಕೆಲ್ ಅಲ್ಲಿಂದಲೇ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ಸಂದರ್ಶನದ ವೇಳೆ ಈ ಸ್ಫೋಟಕ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾನೆ. “ಈ ಹಿಂದೆ ನಡೆದ ವಿಶ್ವಸಂಸ್ಥೆ ಸಮ್ಮೇಳನದ ಸಂದರ್ಭದಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ರೆಂಝಿ ನಡುವೆ ಖಾಸಗಿ ಮಾತುಕತೆ ನಡೆದಿತ್ತು. ಇದು ಅಧಿಕೃತ ಭೇಟಿಯಾಗಿರಲಿಲ್ಲ. ಈ ವೇಳೆ ಇಟಲಿಯ ಬಂಧಿತ ನಾವಿಕರಾದ ಮಸ್ಸಿಮಿಲಿಯಾನೋ ಲಾಟೋರೆ ಮತ್ತು ಸಾಲ್ವತೋರ್‌ ಗಿರೋನೆ ಅವರನ್ನು ಭಾರತ ಬಂಧಮುಕ್ತಗೊಳಿಸಬೇಕು ಎಂದು ರೆಂಝಿ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆ ಈಡೇರದೇ ಹೋದರೆ ಮೋದಿ-ರೆಂಝಿ ನಡುವಿನ ಖಾಸಗಿ ಸಂಭಾಷಣೆಯನ್ನು ಇಟಲಿ ಸರ್ಕಾರ ಬಿಡುಗಡೆಗೊಳಿಸಬಹುದು ಎಂದು ಮೈಕೆಲ್ ಹೇಳಿದ್ದಾನೆ.

ಭಾರತ ಪ್ರಧಾನಿ ಪ್ರಸ್ತುತ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದು, ಇಟಲಿ ನಾವಿಕರನ್ನು ಬಿಡುಗಡೆ ಮಾಡಿದರೆ ಪ್ರಕರಣದಲ್ಲಿ ಅವರ ಹೆಸರೂ ತಳುಕು ಹಾಕಿಕೊಳ್ಳುತ್ತದೆ. ಬಿಡುಗಡೆ ಮಾಡದಿದ್ದರೆ ಇಟಲಿ ಸರ್ಕಾರ ಅವರ ನಡುವಿನ ಸಂಭಾಷಣೆಯನ್ನು ಬಿಡುಗಡೆ ಮಾಡುತ್ತದೆ ಎಂದು ಮೈಕೆಲ್ ಹೇಳಿದ್ದಾನೆ.

ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಇಟಲಿ ಪ್ರಧಾನಿ ರೆಂಝಿ ಅವರನ್ನು ಖಾಸಗಿಯಾಗಿ ಭೇಟಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರ ಕುರಿತ ಮಾಹಿತಿ ಕೇಳಿದ್ದರು. ಇದಕ್ಕೆ ಬದಲಾಗಿ ಇಟಲಿ ಪ್ರಧಾನಿ ಕೊಲೆ ಆರೋಪ ಎದುರಿಸುತ್ತಿರುವ ತಮ್ಮ ದೇಶದ ನಾವಿಕರನ್ನು ಬಿಡುಗಡೆಗೊಳಿಸಲು ಕೇಳಿತ್ತು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಊಹಾಪೋಹಗಳನ್ನು ಉಭಯ ದೇಶಗಳ ಸರ್ಕಾರದ ವಕ್ತಾರರು ತಳ್ಳಿಹಾಕಿದ್ದರು. ಉಭಯ ನಾಯಕರ ನಡುವೆ ಅಂತಹ ಭೇಟಿಯಾಗಿಲ್ಲ ಎಂದು ಹೇಳಿದ್ದರು.

Write A Comment